ಒಡಿಶಾ ಮತ್ತು ಚತ್ತೀಸ್ಗಢ ನಡುವಿನ ಮಹಾನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ಕೇಂದ್ರ ಸರ್ಕಾರ ಮೂವರು ಸದಸ್ಯರ ಮಹಾನದಿ ಜಲ ವಿವಾದ ನ್ಯಾಯಾಧೀಕರಣ ರಚಿಸಿದೆ. ಈ ಕುರಿತು ಅಧಿಸೂಚನೆ ಹೊರಡಿಸಲಾಗಿದ್ದು, ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಎ.ಎಂ. ಕನ್ವಿಲ್ಕರ್ ಮಂಡಳಿಯ ಅಧ್ಯಕ್ಷರಾಗಿದ್ದು, ಪಾಟ್ನಾ ಹೈಕೋರ್ಟ್ನ ನ್ಯಾಯಮೂರ್ತಿ ರವಿರಂಜನ್ ಹಾಗೂ ದೆಹಲಿ ಹೈಕೋರ್ಟ್ನ ನ್ಯಾಯಮೂರ್ತಿ ಇಂಧರ್ಮೀತ್ ಕೌರ್ ಕೊಚ್ಚಾರ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ನ್ಯಾಯಮಂಡಳಿಯ ಕಚೇರಿ ದೆಹಲಿಯಲ್ಲಿ ಇರಲಿದೆ. ಕಳೆದ ಜನವರಿಯಲ್ಲಿ ಒಡಿಶಾ ಸರ್ಕಾರ ಸಲ್ಲಿಸಿದ್ದ ಮನವಿ ಮೇರೆಗೆ ಸುಪ್ರೀಂಕೋರ್ಟ್ ನ್ಯಾಯಾಧೀಕರಣ ಸ್ಥಾಪಿಸುವಂತೆ ಆದೇಶ ನೀಡಿತ್ತು. ಅಂತಾರಾಜ್ಯ ನದಿ ನೀರು ಹಂಚಿಕೆ ಕಾಯ್ದೆ 1956ರ ಅಡಿ ನ್ಯಾಯಾಧೀಕರಣ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಪೀಠ ಸೂಚಿಸಿತ್ತು.