ಬೇಲೂರು, ಫೆ.3- ಅನಿಲ ಸೋರಿಕೆಯಾಗಿರುವುದನ್ನು ಗಮನಿಸದೆ ಅಡುಗೆ ಮಾಡಲು ಹೋದಾಗ ಬೆಂಕಿ ಹೊತ್ತಿಕೊಂಡು ಮನೆಯ ವಸ್ತುಗಳು ಸುಟ್ಟು, ವ್ಯಕ್ತಿಯೊಬ್ಬರಿಗೆ ಗಂಭೀರವಾಗಿ ಸುಟ್ಟ ಗಾಯಗಳಾಗಿರುವ ಘಟನೆ ನಡೆದಿದೆ.
ಪಟ್ಟಣದ ಕೆಂಪೇಗೌಡ ರಸ್ತೆಯ ಗೋಪಾಲಶೆಟ್ಟಿ ಎಂಬುವವರ ಮನೆಯೊಂದರಲ್ಲಿ ಬಾಡಿಗೆಗಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಲ್ಲಿ ಕ್ಯಾಷಿಯರ್ ಕೆಲಸ ನಿರ್ವಹಿಸುವ ಮಂಗಳೂರು ಸಮೀಪದ ಸುಳ್ಯ ಗ್ರಾಮದ 34 ವರ್ಷದ ದಯಾನಂದ್ ಕಚೇರಿಯಲ್ಲಿ ಕೆಲಸ ಮುಗಿಸಿ ಊಟಕ್ಕಾಗಿ ಮನೆಯಲ್ಲಿ ಅಡುಗೆ ಮಾಡಲು ಒಲೆ ಹಚ್ಚಿದ್ದಾರೆ.
ಮೊದಲೆ ಅನಿಲ ಸೋರಿಕೆಯಾಗಿದ್ದರಿಂದ ತಕ್ಷಣವೆ ಮನೆಯೆಲ್ಲ ಬೆಂಕಿ ಆವರಿಸಿದೆ.ಈ ಘಟನೆಯಲ್ಲಿ ದಯಾನಂದ್‍ಗೆ ಸುಟ್ಟ ಗಾಯಗಳಾಗಿವೆ. ಮನೆಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು, ಕಿಟಕಿ ಬಾಗಿಲುಗಳು ಪುಡಿಯಾಗಿವೆ.
ಮನೆಯಿಂದ ದೊಡ್ಡದಾಗಿ ಶಬ್ದ ಹಾಗೂ ಹೊಗೆ ನೋಡಿದ ಸ್ಥಳಿಯರು ಏನಾಗಿದೆ ಎಂದು ನೋಡುತ್ತಿದ್ದಂತೆಯೆ ಮನೆಯಿಂದ ಹೊರಬಂದ ದಯಾನಂದ್ ಸುಟ್ಟ ಗಾಯಗಳಿಂದಾಗಿ ನರಳುತ್ತಿದ್ದರು.
ತಕ್ಷಣವೆ ಆ್ಯಂಬುಲೆನ್ಸ್‍ನಲ್ಲಿ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ಕಳುಹಿಸಲಾಗಿದೆ.
ಅಗ್ನಿಶಾಮಕ ಸಿಬ್ಬಂದಿಗಳು ತಕ್ಷಣವೆ ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.ಸ್ಥಳಕ್ಕೆ ಪಿಎಸ್‍ಐ ಜಗದೀಶ್ ಹಾಗೂ ಸಿಬ್ಬಂದಿಗಳು ಆಗಮಿಸಿ ಸ್ಥಳದಲ್ಲಿ ಪರಿಶೀಲನೆ ನಡೆಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.