ನವದೆಹಲಿ, ಜ.31-ಭ್ರಷ್ಟಾಚಾರ ಮುಕ್ತ ರಾಷ್ಟ್ರ ನಿರ್ಮಾಣ, ಸಾಮಾಜಿಕ ನ್ಯಾಯ, ಬಡವರ ಶ್ರೇಯೋಭಿವೃದ್ಧಿ ಮತ್ತು ಎಲ್ಲಾ ವರ್ಗಗಳ ಪ್ರಗತಿಗಾಗಿ ನಾವೆಲ್ಲರೂ ಒಗ್ಗೂಡಿ ಶ್ರಮಿಸೋಣ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಸಲಹೆ ನೀಡಿದ್ದಾರೆ.
ಇಂದಿನಿಂದ ಆರಂಭವಾಗಿರುವ ಸಂಸತ್ ಬಜೆಟ್ ಅಧಿವೇಶನದ ಮೊದಲ ದಿನ ಪಾರ್ಲಿಮೆಂಟ್ನ ಸೆಂಟ್ರಲ್ ಹಾಲ್ನಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನವ ಭಾರತ ನಿರ್ಮಾಣದತ್ತ ಕಾರ್ಯೋನ್ಮುಖವಾಗಿದ್ದು, ದೇಶದ ಜನರಲ್ಲಿ ಭರವಸೆ ಮೂಡಿಸಿದೆ. 2014ರ ಲೋಕಸಭೆ ಚುನಾವಣೆಗೆ ಮುನ್ನ ದೇಶದಲ್ಲಿ ಅನಿಶ್ಚಿತ ಪರಿಸ್ಥಿತಿ ತಲೆದೋರಿತ್ತು. ಮೋದಿ ಪ್ರಧಾನಿಯಾದ ನಂತರ ಉತ್ತಮ ಕಾರ್ಯಗಳನ್ನು ಅನುಷ್ಠಾನಗೊಳಿಸಿ ಹೊಸ ಭಾರತ ನಿರ್ಮಾಣದಲ್ಲಿ ದಾಪುಗಾಲು ಹಾಕಿದ್ದಾರೆ ಎಂದು ರಾಷ್ಟ್ರಪತಿ ಹೇಳಿದರು.
ಕ್ರಾಂತಿಯೋಗಿ ಮತ್ತು ಸಮಾಜ ಸುಧಾರಕ ಬಸವಣ್ಣನವರ ವಚನವನ್ನು ರಾಷ್ಟ್ರಪತಿ ಉಲ್ಲೇಖಿಸಿದರು. ದಯವೇ ಧರ್ಮದ ಮೂಲವಯ್ಯ ಎಂದು ಅವರು ವಚನದ ಮಹತ್ವವನ್ನು ಸಾರಿದರು. ಸಮಾಜದ ಎಲ್ಲ ವರ್ಗಗಳ ಆಶೋತ್ತರಗಳನ್ನು ಈಡೇರಿಸಲು ಸರ್ಕಾರ ಶ್ರಮಿಸುತ್ತಿದೆ ಎಂದು ಅವರು ಎನ್ಡಿಎ ಆಡಳಿತದ ಅಭಿವೃದ್ದಿ ಕಾರ್ಯಕ್ರಮಗಳನ್ನು ಪಟ್ಟಿ ಮಾಡಿದರು.
ಸರ್ಕಾರ ಬಡವರು, ಶೋಷಿತರು ಮತ್ತು ದುರ್ಬಲರ ಪರವಾಗಿದೆ. ಸ್ವಚ್ಛ ಭಾರತ ಯೋಜನೆಯಡಿ ದೇಶಾದ್ಯಂತ 9 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದರಿಂದ ಬಡವರು ರೋಗ ಮುಕ್ತರಾಗಿದ್ದಾರೆ ಎಂದು ರಾಷ್ಟ್ರಪತಿ ಹೇಳಿದರು.
ಉಜ್ವಲ ಯೋಜನೆ ಮೂಲಕ ಆರು ಕೋಟಿ ಅನಿಲ ಸಂಪರ್ಕ ಕಲ್ಪಿಸಲಾಗಿದ್ದು, ಇದರಿಂದ ಮಹಿಳೆಯರಿಗೆ ಬಹಳಷ್ಟು ಪ್ರಯೋಜನವಾಗಿದೆ ಎಂದು ಕೋವಿಂದ್ ತಿಳಿಸಿದರು.
ಆಯಷ್ಮಾನ್ ಭಾರತ್ ಯೋಜನೆಯಡಿ ಕೇವಲ 4 ತಿಂಗಳ ಅವಧಿಯಲ್ಲಿ 10 ಲಕ್ಷ ಜನರಿಗೆ ಆರೋಗ್ಯ ಸೌಲಭ್ಯ ಕಲ್ಪಿಸಲಾಗಿದೆ. ಒಂದು ರೂ. ಪ್ರೀಮಿಯಂನೊಂದಿಗೆ ಆರೋಗ್ಯ ವಿಮಾ ಸೌಲಭ್ಯ ಒದಗಿಸಿರುವುದು ಸರ್ಕಾರದ ಸಾಧನೆಯಾಗಿದೆ. 21 ಕೋಟಿ ಜನರಿಗೆ ಈ ವಿಮಾ ಸೌಲಭ್ಯ ಒದಗಿಸಲಾಗಿದೆ. ನಗರಗಳು ಅಥವಾ ಗ್ರಾಮಗಳಿರಲಿ ಎಲ್ಲರಿಗೂ ಆರೋಗ್ಯ ಆರೈಕೆ ಮೂಲಸೌಕರ್ಯಾಭಿವೃದ್ದಿಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದರು.
ದೇಶದ ಪ್ರತಿಯೊಬ್ಬ ಬಡವರಿಗೂ ಮನೆ ಕಲ್ಪಿಸಿಕೊಡುವ ಯೋಜನೆ ಸಾಕಾರಗೊಳ್ಳುತ್ತಿದೆ. ನಾಲ್ಕು ವರ್ಷಗಳಲ್ಲಿ ಒಂದು ಕೋಟಿ ಜನರಿಗೆ ಈಗಾಗಲೇ ಮನೆಗಳನ್ನು ನಿರ್ಮಿಸಿಕೊಡಲಾಗಿದೆ ಎಂದು ಅವರು ತಿಳಿಸಿದರು.
ಪ್ರಧಾನಮಂತ್ರಿ ಅವರ ಸೌಭಾಗ್ಯ ಯೋಜನೆಯಡಿ 2 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ಮುದ್ರಾ ಸಾಲ ಸೌಲಭ್ಯ ಪಡೆದಿರುವ 15 ಕೋಟಿ ಫಲಾನುಭವಿಗಳಲ್ಲಿ ಶೇ.73ರಷ್ಟು ಮಹಿಳೆಯರೇ ಆಗಿದ್ದಾರೆ. ಜನರ ಆದಾಯ ಸಲ್ಲಿಕೆ ಶೇ.3.8ರಿಂದ ಶೇ.6.8ಕ್ಕೆ ದುಪ್ಪಟ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಅವರು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗಾಗಿ 80,000 ಕೋಟಿ ರೂ.ಗಳಲ್ಲಿ ಈಗಾಗಲೇ 66,000 ಕೋಟಿ ರೂ.ಗಳ ವೆಚ್ಚದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಕೇಂದ್ರ ಅನುಮೋದನೆ ನೀಡಿದೆ.
ಮುಸ್ಲಿಂ ಮಹಿಳೆಯರ ಜೀವನಕ್ಕೆ ಭದ್ರತೆ ಒದಗಿಸಲು ತ್ರಿವಳಿ ತಲಾಖ್ ನಿಷೇಧ ಮಸೂದೆ ಅಂಗೀಕಾರದ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ರಾಷ್ಟ್ರಪತಿ ಹೇಳಿದರು.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಸದೆ ಬಡಿಯುವ ಸರ್ಜಿಕಲ್ ಸ್ಟ್ರೈಕ್ ಮೂಲಕ ಭಾರತ ಇಡೀ ಜಗತ್ತಿಗೆ ತನ್ನ ಸಾಮಥ್ರ್ಯ ಪ್ರದರ್ಶಿಸಿದೆ. ತನ್ನ ಸಾಮಥ್ರ್ಯ ಹೆಚ್ಚಿಸಿಕೊಳ್ಳಲು ಭಾರತೀಯ ವಾಯು ಪಡೆಗೆ ಶೀಘ್ರವೇ ಅತ್ಯಾಧುನಿಕ ರಫೇಲ್ ಯುದ್ದ ವಿಮಾನಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದರು.