ನ್ಯೂಜಿಲ್ಯಾಂಡ್ ದಾಳಿಗೆ ಹೀನಾಯ ಸೋಲು ಕಂಡ ಟೀಂಇಂಡಿಯಾ

ಹ್ಯಾಮಿಲ್ಟನ್, ಜ.31- ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಏಕದಿನ ಸರಣಿಯನ್ನು ಗೆದ್ದು ಬೀಗಿದ್ದ ಟೀಂಇಂಡಿಯಾ ಇಂದಿಲ್ಲಿ ನಡೆದ 4ನೆ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‍ನ ವೇಗದ ಬೌಲರ್ ಟ್ರೆಂಡ್ ಬೋಲ್ಟ್ ಹಾಗೂ ಅರೆಕಾಲಿಕ ಬೌಲರ್ ಹ್ಯಾಂಡ್ಸ್‍ಕೋಮ್‍ರ ಮಾರಕ ದಾಳಿಯಿಂದಾಗಿ ಹೀನಾಯ ಸೋಲು ಕಂಡಿದೆ.
ಟಾಸ್ ಗೆದ್ದು ಮೊದಲು ಪ್ರವಾಸಿ ಭಾರತ ತಂಡವನ್ನು ಬ್ಯಾಟಿಂಗ್ ಆಮಂತ್ರಿಸಿದ ಕೇನ್‍ವಿಲಿಯಮ್ಸ್‍ರ ಕಾರ್ಯತಂತ್ರ ಫಲ ನೀಡುವ ಮೂಲಕ ರೋಹಿತ್ ಪಡೆ 92 ರನ್‍ಗಳಿಗೆ ಸರ್ವಪತನವಾಯಿತು.

ಸರಣಿಯ ಮೂರು ಪಂದ್ಯಗಳಲ್ಲೂ ತಮ್ಮ ಬ್ಯಾಟಿಂಗ್ ವೈಭವವನ್ನು ಪ್ರದರ್ಶಿಸಿದ್ದ ರೋಹಿತ್‍ಶರ್ಮಾ ಹಾಗೂ ಶಿಖರ್‍ಧವನ್ ಇಂದು ಕೂಡ ದೊಡ್ಡ ಇನ್ನಿಂಗ್ಸ್ ಕಟ್ಟಲು ನಿಧಾನಗತಿಯ ಆಟಕ್ಕೆ ಮುಂದಾಗಿದ್ದರಾದರೂ 1 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 13 ರನ್ ಗಳಿಸಿದ ಧವನ್ ವೇಗಿ ಟ್ರೆಂಟ್ ಬೋಲ್ಟ್‍ನ ಚೆಂಡಿನ ಗತಿಯನ್ನು ಅರಿಯದೆ ಎಲ್‍ಬಿಡಬ್ಲ್ಯು ಬಲೆಗೆ ಬೀಳುವ ಮೂಲಕ ನಿರಾಸೆ ಅನುಭವಿಸಿದರು.

ನಂತರ ತನ್ನ ಬೌಲಿಂಗ್ ಮೊನಚಿನಿಂದಾಗಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (7 ರನ್), ಶುಭಮನ್‍ಗಿಲ್ (9 ರನ್), ಕೇದಾರ್‍ಜಾಧವ್ (1 ರನ್), ಹಾರ್ದಿಕ್ ಪಾಂಡ್ಯಾ(16 ರನ್)ಗೆ ಪೆವಿಲಿಯನ್ ಹಾದಿಯನ್ನು ತೋರಿಸಿದರು.

ಟ್ರೆಂಡ್ ಬೋಲ್ಡ್ ಉತ್ತಮ ಸಾಥ್ ನೀಡಿದ ಅರೆಕಾಲಿಕ ಬೌಲರ್ ಹ್ಯಾಂಡ್ಸ್‍ಕೋಮ್, ಅನುಭವಿ ಬ್ಯಾಟ್ಸ್‍ಮನ್ ಗಳಾದ ಅಂಬಟಿ ರಾಯುಡು ಹಾಗೂ ದಿನೇಶ್ ಕಾರ್ತಿಕ್‍ರನ್ನು ಖಾತೆ ತೆರೆಯುವ ಮುನ್ನವೇ ತಮ್ಮ ಬೌಲಿಂಗ್ ಮೋಡಿಗೆ ತಲೆದೂಗುವಂತೆ ಮಾಡಿದರೆ, 15 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದ ಕುಲದೀಪ್ ಯಾದವ್‍ಗೂ ಪೆವಿಲಿಯನ್ ಹಾದಿ ತೋರಿಸಿದರು. ವೇಗಿ ಖಲೀಲ್ ಅಹಮದ್ ಅವರು ನಿಶಾನ್ ಬೌಲಿಂಗ್‍ನಲ್ಲಿ ಕ್ಲೀನ್ ಬೋಲ್ಡ್ ಮಾಡಿ ಭಾರತದ ಇನ್ನಿಂಗ್ಸ್‍ಗೆ ಮಂಗಳ ಹಾಡಿದರು.

ಯಜುವೇಂದ್ರ ಚಹಾಲ್ ಬೊಂಬಾಟ್ ಆಟ:
ನ್ಯೂಜಿಲೆಂಡ್‍ನ ವೇಗದ ಬೌಲಿಂಗ್ ಎದುರು ಭಾರತದ ದಾಂಡಿಗರೇ ಮಂಡಿಯೂರಿದರೆ, ಬೌಲರ್ ಯಜುವೇಂದ್ರ ಚಹಾಲ್ ಸ್ಪೆಷಾಲಿಸ್ಟ್ ಬ್ಯಾಟ್ಸ್‍ಮನ್‍ನಂತೆ 3 ಬೌಂಡರಿಗಳ ಸಮೇತ 18 ರನ್‍ಗಳನ್ನು ಗಳಿಸಿ ಅಜೇಯರಾಗಿ ಉಳಿಯುವ ಮೂಲಕ ಅಚ್ಚರಿ ಮೂಡಿಸಿದರು.

ಕಿವೀಸ್‍ಗಳ ಆರ್ಭಟ:
ಟೀಂ ಇಂಡಿಯಾ ನೀಡಿದ 93 ರನ್‍ಗಳ ಅತ್ಯಲ್ಪ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್‍ನ ಬ್ಯಾಟ್ಸ್‍ಮನ್ ಮಾರ್ಟಿನ್ ಗುಪ್ಟಿನ್, ಭುವನೇಶ್ವರ್ ಕುಮಾರ್ ಮಾಡಿದ ಮೊದಲ ಬಾಲನ್ನು ಸಿಕ್ಸರ್ ಗಟ್ಟಿದರೆ, ನಂತರದ ಎರಡು ಎಸೆತಗಳಲ್ಲಿ ಬೌಂಡರಿಗಳನ್ನು ಗಳಿಸಿ ಆಟವನ್ನು ಬಹುಬೇಗ ಮುಗಿಸುವ ಸೂಚನೆ ನೀಡಿದ್ದರಾದರೂ ಭುವಿಯ 5ನೆ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಹಾರ್ದಿಕ್ ಪಾಂಡ್ಯಾಗೆ ಕ್ಯಾಚ್ ನೀಡಿ ಪೆವಿಲಿಯನ್‍ನತ್ತ ಹೆಜ್ಜೆ ಹಾಕಿದರು.

ಸರಣಿಯುದ್ದಕ್ಕೂ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ನಾಯಕ ಕೇನ್ ವಿಲಿಯಮ್ಸ್ ಇಂದು ಕೂಡ 11 ರನ್ ಗಳಿಸಿ ಭುವನೇಶ್ವರ್‍ಕುಮಾರ್ ಬೌಲಿಂಗನಲ್ಲಿ ವಿಕೆಟ್ ಕೀಪರ್ ದಿನೇಶ್‍ಕಾರ್ತಿಕ್‍ಗೆ ಕ್ಯಾಚ್ ನೀಡಿ ಔಟಾದರು.

ಕೇನ್ ವಿಲಿಯಮ್ಸ್ ಔಟಾದ ನಂತರ ಆಕ್ರಮಣಕಾರಿ ಆಟಕ್ಕೆ ಮುಂದಾದ ಆರಂಭಿಕ ಆಟಗಾರ ನಿಕೋಲಸ್ (30 ರನ್, 4 ಬೌಂಡರಿ 1 ಸಿಕ್ಸರ್) ಹಾಗೂ ರಾಸ್ ಟೇಲರ್ (37ರನ್, 2 ಬೌಂಡರಿ, 3 ಸಿಕ್ಸರ್) 14.4 ಓವರ್‍ಗಳಲ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

10 ಓವರ್‍ಗಳಲ್ಲಿ 4 ಮೇಡಿನ್ ಮಾಡಿ 21 ರನ್‍ಗಳಿಗೆ 5 ವಿಕೆಟ್ ಕಬಳಿಸಿ ಭಾರತ ರನ್ ದಾಹಕ್ಕೆ ಬ್ರೇಕ್ ಹಾಕಿದ ಟ್ರೆಂಟ್ ಬೋಲ್ಟ್ ಪಂದ್ಯಪುರುಷತ್ತರಾದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ