ನವದೆಹಲಿ: ದೇಶದಲ್ಲಿ ಕಳೆದ 45 ವರ್ಷಗಳಲ್ಲೇ 2017-18ರ ಅವಧಿಯಲ್ಲಿ ನಿರುದ್ಯೋಗದ ಪ್ರಮಾಣ ಅತ್ಯಂತ ಹೆಚ್ಚು ಎಂದು ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್ ನಡೆಸಿದ ಸಮೀಕ್ಷೆ ತಿಳಿಸಿದೆ.
ಜುಲೈ 2017ರಿಂದ ಜೂನ್ 2018ರ ನಡುವೆ ‘ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್’ ಸಮೀಕ್ಷೆ ನಡೆಸಿದ್ದು, ನಿರುದ್ಯೋಗ ಪ್ರಮಾಣ ಶೇ.6.1ರಷ್ಟಿದೆ, ಇದು 1972-73ರ ನಂತರ ಅತ್ಯಂತ ಗರಿಷ್ಠ ಪ್ರಮಾಣ ಎಂದಿದೆ. 2016ರ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ 500 ಹಾಗೂ 1000 ರೂ. ಮುಖಬೆಲೆಯ ನೋಟು ನಿಷೇಧದ ನಂತರ ಭಾರತದ ಉದ್ಯೋಗ ಪರಿಸ್ಥಿತಿಯ ಮೊದಲ ಸಮಗ್ರ ಮೌಲ್ಯಮಾಪನ ಇದಾಗಿದ್ದು, ನೋಟ್ ಬ್ಯಾನ್ ಬಳಿಕ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ ಎಂಬುದು ಗಮನಾರ್ಹ ಸಂಗತಿ.
ವಿಶೇಷವಾಗಿ ನಗರ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣ ಶೇ.7.8ರಷ್ಟಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಈ ಪ್ರಮಾಣ ಶೇ.5.3ರಷ್ಟಿದೆ.
ಭಾರತದ ಆರ್ಥಿಕತೆ ವಾರ್ಷಿಕವಾಗಿ ಶೇಕಡ 7ಕ್ಕಿಂತ ಹೆಚ್ಚು ವಿಸ್ತರಣೆಗೊಂಡಿದೆ. ಆರ್ಥಿಕವಗೈ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂದೆನಿಸಿಕೊಳ್ಳುತ್ತಿದೆ ಆದರೆ ಈ ನಡುವೆ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂಬುದು ಮಹತ್ವದ ವಿಚಾರ.
ಇತ್ತೀಚೆಗೆ ರಾಷ್ಟ್ರದ ಪ್ರಮುಖ ವಿತ್ತ ವಿಶ್ಲೇಷಕ ಸಂಸ್ಥೆ ‘ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ’, ಕಳೆದ ವರ್ಷ ರಾಷ್ಟ್ರದಲ್ಲಿ 1.10 ಕೋಟಿ ಉದ್ಯೋಗಗಳು ಕಡಿಮೆಯಾಗಿವೆ ಎಂದು ಹೇಳಿತ್ತು.
ಒಟ್ಟಾರೆ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಹಾಗೂ ನಾಳೆ ಮಂಡನೆಯಾಗುತ್ತಿರುವ ಕೇಂದ್ರದ ಬಜೆಟ್ ಸಿದ್ಧತೆ ನಡುವೆ ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಿದೆ ಎಂಬ ವರದಿ ಪ್ರಧಾನಿ ಮೋದಿ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿದೆ.
India’s unemployment rate at 45-year-high, says report