ಬೆಂಗಳೂರು,ಜ.28-ಕಾಂಗ್ರೆಸ್ ಶಾಸಕರ ನಡುವಿನ ಹೊಡೆದಾಟದಲ್ಲಿ ವಿಜಯನಗರ ಶಾಸಕ ಆನಂದ್ ಸಿಂಗ್ ಗಾಯಗೊಂಡು ಆಸ್ಪತ್ರೆ ಸೇರಿ ವಾರವೇ ಕಳೆದರೂ ಇದಕ್ಕೆ ಕಾರಣರಾದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಅಸಮಾಧಾನಕ್ಕೆ ಎಡೆಮಾಡಿ ಕೊಟ್ಟಿದೆ.
ಒಂದೆಡೆ ಆನಂದ್ ಸಿಂಗ್ ಪ್ರಕರಣದಲ್ಲಿ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ನಾಪತ್ತೆಯಾಗಿದ್ದು, ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.ಅವರ ಬಂಧನಕ್ಕೆ ತೀವ್ರ ಒತ್ತಾಯವೂ ಕೇಳಿಬಂದಿದೆ.
ಇಂದೂ ಸಹ ಆನಂದ್ ಸಿಂಗ್ ಅವರನ್ನು ನೋಡಲು ಬಂದ ಅನೇಕ ಅಭಿಮಾನಿಗಳು ಕಾರ್ಯಕರ್ತರು ಪಕ್ಷ ಹಾಗೂ ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ಪ್ರತಿಭಟನೆಯಿಂದ ಹಿಂದೆ ಸರಿದಿದ್ದೇವೆ. ಆದರೆ ಶಾಸಕರ ಮೇಲೆ ಹಲ್ಲೆ ನಡೆಸಿರುವವರನ್ನೂ ತಕ್ಷಣ ಬಂಧಿಸಬೇಕು.ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಸಚಿವರಾದ ಕೆ.ಜೆ.ಜಾರ್ಜ್ ಹಾಗೂ ಕೃಷ್ಣಭೆರೇಗೌಡ ಅವರನ್ನೊಳಗೊಂಡ ತನಿಖೆ ಸಮಿತಿ ರಚಿಸಲಾಗಿದ್ದು, ಈ ಸಮಿತಿ ಆನಂದ್ ಸಿಂಗ್ ಅವರನ್ನು ಭೇಟಿ ಮಾಡಿ ಘಟನೆ ಬಗ್ಗೆ ಮಾಹಿತಿ ಕಲೆಹಾಕಿದೆ.
ಇಂದು ಈ ಸಮಿತಿ ಕೆಪಿಸಿಸಿ ಅಧ್ಯಕ್ಷರಿಗೆ ಈ ಘಟನೆ ಸಂಬಂಧ ಮಧ್ಯಂತರ ವರದಿಯನ್ನು ನೀಡಲಾಗುತ್ತಿದೆ. ನಂತರ ಈ ವರದಿಯನ್ನು ಕಾಂಗ್ರೆಸ್ ಹೈಕಮಾಂಡ್ಗೆ ತಲುಪಿಸಲಿದೆ.
ಇಷ್ಟೆಲ್ಲ ಘಟನಾವಳಿ ನಡೆದಿದ್ದರೂ ಆರೋಪ ಎದುರಿಸುತ್ತಿರುವ ಗಣೇಶ್ ಅವರ ಬಂಧನ ಇದುವರೆಗೂ ಅಗದಿರುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.
ಆನಂದ್ ಸಿಂಗ್ ಆರೋಗ್ಯ ವಿಚಾರಿಸಲು ದೂರದ ವಿಜಯನಗರದಿಂದ ಬಂದ ಅಭಿಮಾನಿಗಳು , ಕಾರ್ಯಕರ್ತರು, ಶಾಸಕರ ಈ ಸ್ಥಿತಿಗೆ ಕಾರಣರಾದವರ ವಿರುದ್ಧ ಕ್ರಮ ವಹಿಸುವಂತೆ ಒತ್ತಾಯಿಸಿದ್ದಾರೆ.