ನಗರದ ಸಮಗ್ರ ಅಭಿವೃದ್ಧಿಗೆ ರೋಡ್ ಮ್ಯಾಪ್ ಸಿದ್ಧಪಡಿಸಲಾಗಿದೆ: ಉಪಮುಖ್ಯಮಂತ್ರಿ ಜಿ.ಪರಮೇಶ್ವರ್

ಬೆಂಗಳೂರು,ಜ.28-ನಗರದ ಸಮಗ್ರ ಅಭಿವೃದ್ಧಿಗೆ ರೋಡ್ ಮ್ಯಾಪ್ ಸಿದ್ಧಪಡಿಸಿದ್ದು, ಮುಂದಿನ ಐದು ವರ್ಷಗಳಲ್ಲಿ ಐದು ಸಾವಿರ ಕೋಟಿ ರೂ. ಖರ್ಚು ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಂಕರಮಠ ವಾರ್ಡ್‍ನಲ್ಲಿ ಹತ್ತು ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಇಡೀ ನಗರಕ್ಕೆ ಎಲ್‍ಇಡಿ ಲೈಟ್ ಅಳವಡಿಸಲಾಗುತ್ತಿದೆ.ಹೀಗಾಗಿ 17 ಕೋಟಿ ರೂ.ಉಳಿತಾಯವಾಗಲಿದೆ.ಅದೇ ರೀತಿ ನಗರದಲ್ಲಿ ಪ್ರತಿನಿತ್ಯ 85 ಲಕ್ಷಕ್ಕೂ ಹೆಚ್ಚು ಮಂದಿ ಓಡಾಡುತ್ತಾರೆ. ಹೀಗಾಗಿ ಉಂಟಾಗುವ ವಾಹನ ಮತ್ತು ಜನಸಂದಣಿಯನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದ 25 ಸಾವಿರ ಕೋಟಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಕೆಲವರು ದುರದ್ದೇಶಪೂರ್ವಕವಾಗಿ ಯೋಜನೆಗೆ ಅಡ್ಡಿಪಡಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ.ಯಾರಾದರೂ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಅಡ್ಡಿಪಡಿಸಲು ಮುಂದಾದರೆ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪರಂ ಎಚ್ಚರಿಸಿದರು.

ನಗರದ ಕುಡಿಯುವ ನೀರಿನ ಅಭಾವ ತಪ್ಪಿಸಬೇಕು ಎಂಬ ಉದ್ದೇಶದಿಂದ 290 ಕೋಟಿ ರೂ. ವೆಚ್ಚ ಮಾಡಿ ಕಾವೇರಿ ನೀರು ಹರಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಅವರು ವಿವರಿಸಿದರು.

ನಗರದ ಸಮಗ್ರ ಅಭಿವೃದ್ದಿಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಸಿದ್ದವಿದೆ. ನಮ್ಮ ಈ ನಿರ್ಧಾರಕ್ಕೆ ತಕ್ಕಂತೆ ಸಾರ್ವಜನಿಕರು ಸರಿಯಾದ ಸಮಯಕ್ಕೆ ತೆರಿಗೆ ಕಟ್ಟಬೇಕು.ತೆರಿಗೆ ವಂಚಿಸಿದರೆ ಇಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಲ್ಲದೆ ಅವರ ಹೆಸರುಗಳನ್ನು ಮಾಧ್ಯಮಗಳಲ್ಲಿ ಬಹಿರಂಗ ಪಡಿಸಲಾಗುವುದು ಎಂದು ಹೇಳಿದರು.

ಶಂಕರಮಠ ವಾರ್ಡ್‍ನಲ್ಲಿ ಬಿಬಿಎಂಪಿ ಸದಸ್ಯ ಶಿವರಾಜ್ ಅವರ ದೂರದರ್ಶಿತ್ವದಿಂದ ಉತ್ತಮ ಕಾರ್ಯಗಳು ಆಗುತ್ತಿವೆ. 10 ಕೋಟಿ ರೂ. ವೆಚ್ಚದಲ್ಲಿ ಇಡೀ ವಾರ್ಡ್‍ನಾದ್ಯಂತ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಸುಸಜ್ಜಿತ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದೆ. ಇನ್ನು ಕೆಲವು ಪ್ರದೇಶಗಳಲ್ಲಿ ಐದು ಸಾವಿರ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ.ಇದರಿಂದ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮಾದರಿ ವಾರ್ಡ್ ಮಾಡಲಾಗುವುದು:
ಶಂಕರಮಠ ವಾರ್ಡ್‍ನ್ನು ಮಾದರಿ ವಾರ್ಡ್ ಮಾಡಲು ಸಂಕಲ್ಪ ಮಾಡಲಾಗಿದೆ ಎಂದು ಸ್ಥಳೀಯ ಪಾಲಿಕೆ ಸದಸ್ಯ ಹಾಗೂ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ತಿಳಿಸಿದರು.

ಈಗಾಗಲೇ 10 ಕೋಟಿ ರೂ.ವೆಚ್ಚದಲ್ಲಿ ಇಡೀ ವಾರ್ಡ್‍ನಾದ್ಯಂತ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.ಅತ್ಯಾಧುನಿಕ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದ್ದು, ಇಡೀ ವಾರ್ಡ್‍ನಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ನಿಯಂತ್ರಣ ಕೊಠಡಿಯಿಂದ ವೀಕ್ಷಿಸಬಹುದಾಗಿದೆ.

ಉದಯರವಿ ಉದ್ಯಾನವನದಲ್ಲಿ ರವಿ ಕಿರ್ಲೋಸ್ಕರ್ ಪ್ರತಿಮೆ ನಿರ್ಮಾಣ, ಬೆಂಗಳೂರು-1 ಕಟ್ಟಡ, ಪಾಲಿಕೆ ಕಟ್ಟಡ, ಪಾಲಿಕೆ ಸದಸ್ಯರ ಕಚೇರಿ, ಬ್ಯಾಡ್ಮಿಂಟನ್ ಒಳ ಕ್ರೀಡಾಂಗಣ, ಹೊರಾಂಗಣ ವ್ಯಾಯಾಮ ಕೇಂದ್ರ, ಮಕ್ಕಳ ಆಟೋಪಕರಣಗಳ ಉದ್ಘಾಟನೆ, ಉಚಿತ ಹೊಲಿಗೆ ತರಬೇತಿ ಕೇಂದ್ರ, ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಹಲವಾರು ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಎಂದರು.

ವಾರ್ಡ್‍ನ ಪ್ರಮುಖ ರಸ್ತೆಯೊಂದನ್ನು ಎಂ.ಜಿ.ರಸ್ತೆ ಮಾದರಿ ಅಭಿವೃದ್ದಿಪಡಿಸಲಾಗಿದೆ. ಐದು ಪ್ರಮುಖ ಸ್ಥಳಗಳಲ್ಲಿ ಉಚಿತ ವೈಫೈ ಸೇವೆ ಒದಗಿಸಲು ಕೆಲವೇ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು, ಶಂಕರಮಠವನ್ನು ಕಸಮುಕ್ತ ವಾರ್ಡ್ ಮಾಡಲು ಶಪಥ ಮಾಡಲಾಗಿದೆ.ನಮ್ಮ ಈ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಶಿವರಾಜ್ ಮನವಿ ಮಾಡಿಕೊಂಡರು.

ಶಾಸಕ ಕೆ.ಗೋಪಾಲಯ್ಯ, ಮೇಯರ್ ಗಂಗಾಂಬಿಕೆ, ಉಪಮೇಯರ್ ಭದ್ರೇಗೌಡ, ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ, ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತಿತರ ಗಣ್ಯರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ