ಮೈಸೂರು, ಜ.25-ನಗರದ ಖಾಸಗಿ ಹೋಟೆಲ್ನಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವ ಸಲುವಾಗಿ ವಾಮ ಮಾರ್ಗದ ಮೂಲಕ ಸರ್ಕಾರ ಉರುಳಿಸಲು ಹಲವು ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಕೆಲವು ಶಾಸಕರಿಗೆ ಆಪರೇಷನ್ ಕಮಲದ ಮೂಲಕ ಕೋಟ್ಯಂತರ ರೂ. ಆಮಿಷವೊಡ್ಡಿ ಸೆಳೆಯುವುದನ್ನು ಬಿಟ್ಟು ಆ ಹಣವನ್ನು ಬರಪರಿಸ್ಥಿತಿಗಾದರೂ ವಿನಿಯೋಗಿಸಲಿ ಎಂದರು.
ಬಿಜೆಪಿ ರಾಜ್ಯದಲ್ಲಿ ಉತ್ತಮ ವಿಪಕ್ಷವಾಗಿ ಕೆಲಸ ಮಾಡಲಿ. ಇದುವರೆಗೂ ಸಹ ಸರ್ಕಾರಕ್ಕೆ ಒಂದು ಉತ್ತಮವಾದ ಸಲಹೆ-ಸೂಚನೆ ನೀಡಿಲ್ಲ. ಕೇವಲ ಜನತಾಂತ್ರಿಕ ವಿರೋಧಿ ಕೆಲಸವನ್ನೇ ಮಾಡುತ್ತಿದೆ. ಆಡಳಿತಾತ್ಮಕವಾಗಿ ಸಲಹೆ ನೀಡುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ ಎಂದು ತಿಳಿಸಿದರು.
ಇನ್ನಾದರು ಯಡಿಯೂರಪ್ಪ ಮತ್ತು ಅವರ ತಂಡದವರು ಸರ್ಕಾರ ಉರುಳಿಸುವ ಪ್ರಯತ್ನಕ್ಕೆ ಕೈ ಹಾಕದೆ ರಾಜ್ಯದಲ್ಲಿನ ಬರ ಪರಿಸ್ಥಿತಿ ಕಡೆ ಗಮನ ಹರಿಸಿ ಸರ್ಕಾರಕ್ಕೆ ಉತ್ತಮ ಸಲಹೆ-ಸೂಚನೆ ನೀಡಲಿ ಎಂದರು.
ಸಮ್ಮಿಶ್ರ ಸರ್ಕಾರದ ಎಲ್ಲಾ ಸಚಿವರಿಗೂ ಪತ್ರ ಬರೆದು ರೆಸಾರ್ಟ್ ರಾಜಕಾರಣ ಸಾಕು. ಸರ್ಕಾರ ಬೀಳುವುದಿಲ್ಲ. ನಿಮ್ಮ ನಿಮ್ಮ ಜಿಲ್ಲೆಗಳಿಗೆ ತೆರಳಿ ಜನರ ಸಮಸ್ಯೆಗೆ ಸ್ಪಂದಿಸುವ ಮೂಲಕ ಉತ್ತಮ ಕೆಲಸ ಮಾಡಬೇಕೆಂದು ಸಲಹೆ ನೀಡುವುದಾಗಿ ವಿಶ್ವನಾಥ್ ತಿಳಿಸಿದರು.
ಮೋದಿ ವಿರುದ್ಧ ವಾಗ್ದಾಳಿ:
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ನಾಲ್ಕು ವರ್ಷಗಳಿಂದ ಬಜೆಟ್ ವೇಳೆ ಸುಳ್ಳು ಹೇಳಿಕೊಂಡೇ ಬರುತ್ತಿದ್ದಾರೆ. ಈ ಬಜೆಟ್ನಲ್ಲಾದರೂ ನಿಜ ಹೇಳಲಿ ಎಂದು ವಿಶ್ವನಾಥ್ ಹೇಳಿದರು.
ಬಜೆಟ್ಗೆ ಕೆಲವೇ ದಿನಗಳು ಮಾತ್ರ ಇದೆ. ನಮ್ಮ ರಾಜ್ಯದ ಯಾವೊಬ್ಬ ಬಿಜೆಪಿ ನಾಯಕರೂ ಸಹ ಕರ್ನಾಟಕ ರಾಜ್ಯಕ್ಕೆ ಯಾವ ರೀತಿ ನೆರವುಬೇಕು ಎಂಬುದನ್ನು ಹೇಳಿಲ್ಲ ಎಂದು ಅವರು ವ್ಯಂಗ್ಯವಾಡಿದರು.
ಮುಂದಿನ ಬಾರಿ ನರೇಂದ್ರ ಮೋದಿ ಅವರಿಗೆ ಯಾವೊಬ್ಬ ಹೆಣ್ಣುಮಗಳೂ ಸಹ ವೋಟು ಹಾಕುವುದಿಲ್ಲ. ಕಾರಣ ಸಿಲಿಂಡರ್ ಬೆಲೆ ಒಂದು ಸಾವಿರ ರೂ.ಗೆ ಏರಿದೆ. ಪರಿಸ್ಥಿತಿ ಹೀಗಿರುವಾಗ ಯಾರು ಮತ ಚಲಾಯಿಸುತ್ತಾರೆ ಎಂದು ಹೇಳಿದರು.
ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕು ಎಂಬುದು ಸಂವಿಧಾನದಲ್ಲಿ ಇಲ್ಲ. ಹಾಗಾಗಿ ಇದು ಜಾರಿಗೆ ಬರಲ್ಲ. ಇದು ಕೇವಲ ಚುನಾವಣಾ ಗಿಮಿಕ್ ಎಂದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಸತ್ತು ಹೋಗಿದೆ ಎಂದು ಬಿಜೆಪಿ ಆರೋಪಿಸುತ್ತಿದೆಯಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡಾ.ಶ್ರೀ ಶಿವಕುಮಾರಸ್ವಾಮೀಜಿಯವರ ಕೊನೆಯ ದಿನಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗುತ್ತಿತ್ತೆ. ಅಂಬರೀಶ್ ಅವರಿಗೆ ಒಳ್ಳೆಯ ವಿದಾಯ ನೀಡಿದ್ದು ಯಾರು? ಪಾಂಡವಪುರದಲ್ಲಿ ಬಸ್ ಕಾಲುವೆಗೆ ಬಿದ್ದಾಗ ಜನರಿಗೆ ರಕ್ಷಣೆ ಕೊಟ್ಟಿದ್ದು ಯಾರು? ಸಮ್ಮಿಶ್ರ ಸರ್ಕಾರ ಸತ್ತು ಹೋಗಿದ್ದರೆ ಇವೆಲ್ಲಾ ಮಾಡಲು ಸಾಧ್ಯವಾಗುತ್ತಿತ್ತೇ ಎಂದು ಮರುಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೊ.ಕೆ.ಎಸ್.ರಂಗಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.