ಪರಿಪೂರ್ಣತೆಯ ಶ್ರೇಷ್ಟ ಸಾಧಕ ಡಾ. ವಡವಾಟಿ: ಪಿ.ಎನ್. ಶ್ರೀನಿವಾಸಚಾರಿ

ಬೆಂಗಳೂರು: ಜ 01 ವಿಶ್ವವಿಖ್ಯಾತ ಕ್ಲಾರಿಯೋನೆಟ್ ವಾದಕರಾದ ಡಾ. ಪಂ. ನರಸಿಂಹಲು ವಡವಾಟಿಯವರು ಕ್ಲಾರಿಯೋನೆಟ್ ಮಾಂತ್ರಿಕರಾಗಿ, ಹೈದರಾಬಾದ್ ಕರ್ನಾಟಕದ ಹಿಂದುಳಿದ ರಾಯಚೂರಿನ ವಡವಾಟಿಗ್ರಾಮದಿಂದ ಏಕಲವ್ಯರಂತೆ ವಿದ್ಯೆಗಳಿಸಿ, ಸಾರ್ಥಕ ಸಾಧನೆ, ಪ್ರತಿಭೆ, ಸರಳತೆ ಸೌಜನ್ಯಗಳಿಂದ ವಿಶ್ವ ಮಟ್ಟದ ಸಂಗೀತ ಸಮ್ಮೇಳನದಲ್ಲಿ ಸ್ಥಾನ ಪಡೆದುಕೊಂಡು ಲಾಸ್ ಏಂಜಲೀಸ್‍ನಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಪಾಂಚಜನ್ಯ ಮೊಳಗಿಸಿದ್ದು ನಾಡಿನ ಭಾಗ್ಯ ಎಂದು ಅಂತರ ರಾಷ್ಟ್ರೀಯ ಕ್ಲಾರಿಯೋನೆಟ್ ಕಲಾವಿದ ಡಾ. ಪಂ. ನರಸಿಂಹಲು ವಡವಾಟಿಯವರ ಜನುಮ ದಿನದ ಅಂಗವಾಗಿ, ಬೆಂಗಳೂರಿನ ಗಾಂಧೀ ಭವನದಲ್ಲಿ ಏರ್ಪಡಿಸಿದ್ದ ಕಲಾವಿದರ ದಿನ ಹಾಗೂ ಸುಗ್ಗಿಯ ಸೊಬಗಲ್ಲಿ ಸಂಗೀತ ಸಂಜೆ ಕಾರ್ಯಕ್ರಮವನ್ನು ಖ್ಯಾತ ಸಾಹಿತಿ ಚಂದ್ರ ಶೇಖರ ಪಾಟೀಲ ಜ್ಯೋತಿ ಬೆಳಗುವುದರೊಂದಿಗೆ ಉದ್ಘಾಟಿಸಿ ಮಾತನಾಡಿದರು.

ಜನವರಿ 21ರಂದು ಕಲಾವಿದರ ದಿನವನ್ನಾಗಿ ಆಚರಿಸುತ್ತಿರುವುದು ಅರ್ಥಪೂರ್ಣ. ಅಲ್ಲದೆ ನಡೆದಾಡುವ ದೇವರು, ಕರ್ನಾಟಕ ರತ್ನ ಡಾ. ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾದ ದಿನ. ಹಾಗಾಗಿ ಕಲಾವಿದರ ದಿನ ಅಜರಾಮರವಾಗಲಿ ಎಂದು ಚಂಪಾ ಹಾರೈಸಿದರು.

ಎರಡು ಮೂರು ವರ್ಷಗಳು ಕುಳಿತು ಕಷ್ಟ ಪಟ್ಟು ಓದಿದರೆ ಐ.ಎ.ಎಸ್. ಅಧಿಕಾರಿಯಾಗಬಹುದು. ಆದರೆ ಕಲಾವಿದನಾಗಲು ಸತತವಾಗಿ ಜೀವನ ಪೂರ್ತಿ ಸಾಧನೆ ಮಾಡಬೇಕಾಗುತ್ತದೆ. ಕಲಾವಿದರ ದಿನ ಎಂಬುದೇ ಅಧ್ಬುತ ಕಲ್ಪನೆ. ಅಧಿಕಾರಿಗಳನ್ನು ಅಧಿಕಾರದಲ್ಲಿದ್ದಾಗ ಎಲ್ಲರೂ ಗೌರವಿಸುತ್ತಾರೆ. ಆದರೆ ಗಂಧರ್ವ ವಂಶ ಸಂಭೂತರಾದ ಕಲಾವಿದರನ್ನು ಜೀವನ ಪೂರ್ತಿ ಗೌರವಿಸುತ್ತಾರೆ. ಆದರೆ ಕಲಾವಿದರಿಗೆ ನಿಜವಾಗಿ ಎಷ್ಟು ಗೌರವ ಸಿಗಬೇಕಿತ್ತೋ ಅಷ್ಟು ಗೌರವ ಸಿಗುತ್ತಿಲ್ಲಾ ಎಂದು ರಾಜ್ಯ ಚುನಾವಣಾ ಆಯುಕ್ತರಾದ ಪಿ.ಎನ್. ಶ್ರೀನಿವಾಸಚಾರಿಯವರು ಬೇಸರ ವ್ಯಕ್ತಪಡಿಸಿದರು.

ಪರಿಪೂರ್ಣತೆಯ ಸಾಧಕ ಶ್ರೇಷ್ಟ ಡಾ. ವಡವಾಟಿಯವರು. ಮೇಲಕ್ಕೆ ಎತ್ತಿಕೊಳ್ಳದ, ಕೆಳಗಿನಿಂದ ಎತ್ತಿ ಪ್ರೋತ್ಸಾಹಿಸದ ಸಂಧಿಗ್ದತೆಯಲ್ಲಿ ವಿಶ್ವವಿಖ್ಯಾತಿ ಪಡೆದ ಕನ್ನಡ ನಾಡಿನ ಸಂಗೀತ ಕ್ಷೇತ್ರದ ಸಾಧನೆಯಲ್ಲಿ ಧೃವತಾರೆಯಂತಿರುವ ವಡವಾಟಿಯವರ ಸರಳ ಸಜ್ಜನಿಕೆ ಪ್ರತಿಯೊಬ್ಬರಿಗೆ ಆದರ್ಶ, ಮಾದರಿ ಎಂದು ಶ್ಲಾಘಿಸಿದರು. ಡಾ. ಪಂ. ನರಸಿಂಹಲು ವಡವಾಟಿ ದಂಪತಿಗಳನ್ನು ಗೌರವಿಸಲಾಯಿತು. ಎಲ್ಲಾ ಕಲಾವಿದರ ಪರವಾಗಿ ಸಾಂಕೇತಿಕವಾಗಿ ಭೂಪಾಲ್‍ನ ದಾಮೋದರ್ ರಾವ್ ದಂಪತಿಗಳನ್ನು ಸನ್ಮಾನಿಸಲಾಯಿತು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಮಾಜಿ ಸದಸ್ಯರು, ಭಾರತ್ ಸಾಂಸ್ಕೃತಿಕ ಕಲಾ ಕೇಂದ್ರದ ಅಧ್ಯಕ್ಷರಾದ ವಡವಾಟಿ ಶಾರದಾ ಭರತ್ ಪ್ರಾಸ್ತಾವಿಕವಾಗಿ ಮಾತನಾಡಿ ಆಧ್ಯಾತ್ಮ ಕ್ಷೇತ್ರದಲ್ಲಿ ವಿವೇಕಾನಂದರಂತೆ, ಸಂಗೀತ ಕ್ಷೇತ್ರದಲ್ಲಿ ವಿಶ್ವ ಮಟ್ಟದ ಕ್ಲಾರಿಯೋನೆಟ್ ಸಂಗೀತ ಸಮ್ಮೇಳನದಲ್ಲಿ, ಭಾರತದಿಂದ ಪ್ರಪ್ರಥಮ ಬಾರಿಗೆ ಪ್ರತಿನಿಧಿಸಿ, ಜಗತ್ತಿನ ಇತರ ದೇಶಗಳ ವಿದ್ವಾಂಸರೂ ಭಾರತದೆಡೆಗೆ ತಿರುಗಿ ನೊಡುವಂತೆ ಮಾಡಿದ, ತಮ್ಮ ಜೀವನವನ್ನು ಇತರೆ ವೃತ್ತಿಗಳಲ್ಲಿ ತೊಡಗಿಸಿಕೊಳ್ಳದೆ, ಕಲೆಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟ, ಡಾ. ಪಂ. ನರಸಿಂಹಲು ವಡವಾಟಿಯವರ ಕಲಾ ಜೀವನವನ್ನು, ಎಲ್ಲಾ ಕಲಾವಿದರಿಗೆ ಅರ್ಪಿಸಿ, ಅವರ ಜನುಮ ದಿನವಾದ ಜನವರಿ 21ರಂದು “ಕಲಾವಿದರ ದಿನ”ವನ್ನಾಗಿ ಆಚರಿಸಿದ್ದೇವೆ ಎಂದರು. ಕಾರ್ಯದರ್ಶಿ ಕೆ. ಯೋಗ ರವೀಶ್ ಭಾರತ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಭೂಪಾಲ್‍ನ ಕೆ. ವಾಣಿ ರಾವ್ ಹಾಗೂ ವಡವಾಟಿ ಶಾರದಾ ಭರತ್ ಅವರ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಡಾ. ಶಿವಕುಮಾರ ಸ್ವಾಮಿಗಳು ಲಿಂಗೈಕ್ಯರಾದ ಹಿನ್ನಲೆಯಲ್ಲಿ ಕಾರ್ಯಕ್ರಮದ ಆರಂಭದಲ್ಲಿ ಎರಡು ನಿಮಿಷಗಳ ಮೌನಾಚರಣೆಯನ್ನು ಸಲ್ಲಿಸಿ, ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಿ, ಸಂಗೀತ ಕಾರ್ಯಕ್ರಮವನ್ನು ಶ್ರೀಗಳಿಗೆ ಸಮರ್ಪಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ