ಬೆಂಗಳೂರು, ಜ.20- ಕಾಂಗ್ರೆಸ್ನ ಶಾಸಕ ಆನಂದ್ಸಿಂಗ್ ಅವರು ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.ಅದರ ಹೊರತಾಗಿ ಶಾಸಕರ ನಡುವೆ ಯಾವುದೇ ಗಲಾಟೆ ನಡೆದಿಲ್ಲ. ಆನಂದ್ಸಿಂಗ್ಗೆ ಯಾವುದೇ ಗಾಯಗಳಾಗಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಸ್ಪಷ್ಟಪಡಿಸಿದ್ದಾರೆ.
ಆಸ್ಪತ್ರೆಯಲ್ಲಿದ್ದು ಆನಂದ್ಸಿಂಗ್ ಅವರ ಆರೋಗ್ಯ ವಿಚಾರಿಸಿದ ಸುರೇಶ್ ಅವರು ನಂತರ ಹೊರ ಬಂದ ಸುದ್ದಿಗಾರರ ಜತೆ ಮಾತನಾಡಿದರು.
ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಮತ್ತು ಆನಂದಸಿಂಗ್ ನಡುವೆ ಗಲಾಟೆಯಾಗಿದೆ.ಬಾಟಲಿಯಲ್ಲಿ ಆನಂದ್ಸಿಂಗ್ಗೆ ಹಲ್ಲೆ ಮಾಡಲಾಗಿದೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ಅದು ಆಧಾರ ರಹಿತ.ಇಂದು ಬೆಳಗ್ಗೆ 7 ಗಂಟೆಗೆ ಆನಂದ್ಸಿಂಗ್ ಅವರು ತಾವಾಗಿಯೇ ಬಂದು ಶೇಷಾದ್ರಿಪುರಂನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ನಿನ್ನೆಯೆಲ್ಲಾ ಅವರು ಮದುವೆ ಹಾಗೂ ಇತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರಿಂದ ನಿದ್ದೆ ಇರಲಿಲ್ಲ. ಆರೋಗ್ಯ ಕೆಟ್ಟಿದೆ ಎಂಬ ಮಾಹಿತಿ ಇದೆ.ಆಸ್ಪತ್ರೆ ವೈದ್ಯರು ಆನಂದ್ಸಿಂಗ್ ಅವರಿಗೆ ಬಿಪಿ, ಶುಗರ್, ಇಸಿಜಿ ಸೇರಿದಂತೆ ಅನೇಕ ಪರೀಕ್ಷೆಗಳನ್ನು ಮಾಡಿದ್ದಾರೆ.ಚಿಕಿತ್ಸೆ ನೀಡಲಾಗುತ್ತಿದೆ, ಇಂಜೆಕ್ಷನ್ ಕೊಟ್ಟಿರುವುದರಿಂದ ಆನಂದ್ಸಿಂಗ್ ನಿದ್ದೆ ಮಾಡುತ್ತಿದ್ದಾರೆ ಎಂದರು.
ಅವರು ಸಂಪೂರ್ಣ ಆರೋಗ್ಯವಾಗಿದ್ದು, ಅವರ ಮೈ ಮೇಲೆ ಗಾಯಗಳಾಗಿರುವುದು ಕಂಡು ಬಂದಿಲ್ಲ. ನಿನ್ನೆ ರಾತ್ರಿ ನಾನು ರೆಸಾರ್ಟ್ನಲ್ಲೇ ಇದ್ದೆ.ಯಾವುದೇ ಗಲಾಟೆ ನಡೆದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಡಿ.ಕೆ.ಶಿವಕುಮಾರ್ ಅವರಿಗೆ ಆನಂದ್ಸಿಂಗ್ ಅವರು ಆಸ್ಪತ್ರೆಗೆ ದಾಖಲಾದ ಬಗ್ಗೆ ಆರಂಭದಲ್ಲಿ ಮಾಹಿತಿ ಇರಲಿಲ್ಲ ಎಂದು ಹೇಳಿದರು.
ಆನಂದ್ಸಿಂಗ್ ಅವರ ತಂದೆ ನಾನು ಆಸ್ಪತ್ರೆಯಲ್ಲಿ ಇದ್ದಾಗಲೇ ದೂರವಾಣಿಯಲ್ಲಿ ತಮ್ಮ ಮಗನ ಜತೆ ಮಾತುಕತೆ ನಡೆಸಿದ್ದಾರೆ. ಅವರ ಇಡೀ ಕುಟುಂಬ ಮದುವೆಯಲ್ಲಿ ಭಾಗವಹಿಸುವ ಕಾರ್ಯಕ್ರಮಕ್ಕಾಗಿ ಬಾಂಬೆಗೆ ತೆರಳಿದೆ.ಅವರ ಜತೆ ಆನಂದ್ಸಿಂಗ್ ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಆತಂಕಪಡುವ ಅಗತ್ಯವಿಲ್ಲ. ಬಹುತೇಕ ಸಂಜೆ ವೇಳೆಗೆ ಆನಂದ್ಸಿಂಗ್ ಡಿಸ್ಚಾರ್ಜ್ ಆಗಬಹುದು.ಯಾವುದೇ ಗಲಾಟೆ ನಡೆಯದೇ ಇರುವುದರಿಂದ ಪೋಲೀಸರಿಗೆ ದೂರು ನೀಡುವ ಅಗತ್ಯ ಕಂಡು ಬಂದಿಲ್ಲ. ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದೆಲ್ಲಾ ಆಧಾರ ರಹಿತ ಎಂದು ಹೇಳಿದರು.