ಪರಸ್ಪರ ಕೈ ಕೈ ಮಿಲಾಯಿಸಿದ ಕಾಂಗ್ರೇಸ್ ಶಾಸಕರು

ಬೆಂಗಳೂರು,ಜ.20-ಬಳ್ಳಾರಿ ಕಾಂಗ್ರೆಸ್‍ನ ಶಾಸಕರಾದ ಭೀಮಾನಾಯ್ಕ್, ಆನಂದ್ ಸಿಂಗ್ ಮತ್ತು ಗಣೇಶ್ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಕೈ ಕೈ ಮಿಲಾಯಿಸಿದ್ದು, ಈ ಸಂದರ್ಭದಲ್ಲಿ ಆನಂದ ಸಿಂಗ್ ಅವರಿಗೆ ಗಾಯವಾಗಿದ್ದು, ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎನ್ನಲಾಗಿದೆ.

ಆಪರೇಷನ್ ಕಮಲ ಸಂಬಂಧದ ರಹಸ್ಯ ಮಾಹಿತಿಯನ್ನು ಆನಂದ್ ಸಿಂಗ್ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರಿಗೆ ಬಹಿರಂಗಗೊಳಿಸಿದ್ದರು. ತಾವಿರುವ ಮಾಹಿತಿಯನ್ನು ಅವರಿಗೆ ನೀಡಿದ್ದರು ಎಂಬ ಹಿನ್ನೆಲೆಯಲ್ಲಿ ಕಂಪ್ಲಿ ಗಣೇಶ್ ಆಕ್ರೋಶಗೊಂಡು ಅವರ ಮೇಲೆ ತಡರಾತ್ರಿ ಪಾರ್ಟಿ ವೇಳೆ ಬಾಟಲಿಯಿಂದ ಹಲ್ಲೆ ನಡೆಸಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಶಾಸಕರು ಗಲಾಟೆಯನ್ನು ಬಿಡಿಸಿದ್ದಾರೆ.

ಗಾಯಗೊಂಡಿರುವ ಆನಂದ್ ಸಿಂಗ್ ಅವರನ್ನು ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಆದರೆ ಇನ್ನೊಂದು ಮೂಲದ ಪ್ರಕಾರ, ಆನಂದ್‍ಸಿಂಗ್ ಅವರು ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗುತ್ತಿದೆ.

ನಿನ್ನೆ ಸಂಜೆ ನಾಲ್ಕು ಗಂಟೆಗೆ ವಿಧಾನಸೌಧದಲ್ಲಿ ಬಳ್ಳಾರಿ ಜಿಲ್ಲೆ ಅಭಿವೃದ್ಧಿ ಕುರಿತು ಸಚಿವ ಡಿ.ಕೆ.ಶಿವಕುಮಾರ್ ಅವರು ಸಭೆ ನಡೆಸಿದ್ದರು.ಈ ಸಭೆಯಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ಭಾಗವಹಿಸಿದ್ದರು.ನಂತರ ಶಾಸಕ ಹ್ಯಾರೀಸ್ ಅವರ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಂಡಿದ್ದರು.ಆ ನಂತರ ರೆಸಾರ್ಟ್‍ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ಕಳೆದ ಎರಡು ದಿನಗಳಿಂದ ಈ ಮೂವರ ನಡುವೆ ಈ ಸಂಬಂಧ ಮಾತಿನ ಚಕಮಕಿ ನಡೆದಿತ್ತು.ತಡರಾತ್ರಿ ಪಾರ್ಟಿ ವೇಳೆ ಗಲಾಟೆ ನಡೆದಿದೆ ಎನ್ನಲಾಗಿದೆ.

ಕಳೆದ ಎರಡು ದಿನಗಳಿಂದ ಈಗಲ್‍ಟನ್ ರೆಸಾರ್ಟ್‍ನಲ್ಲಿ ಕಾಂಗ್ರೆಸ್ ಶಾಸಕರು ಬೀಡು ಬಿಟ್ಟಿದ್ದಾರೆ.ಬಿಡದಿ ರೆಸಾರ್ಟ್‍ನಿಂದ ಇಂದು ಎಲ್ಲರೂ ಸ್ವಕ್ಷೇತ್ರಕ್ಕೆ ಮರಳುವ ಸಾಧ್ಯತೆಯಿದೆ.ಬೆಳಗ್ಗೆ 11 ಗಂಟೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರೊಂದಿಗೆ ಶಾಸಕರ ಸಭೆಯನ್ನು ಕೂಡಾ ಆಯೋಜಿಸಲಾಗಿದೆ. ಅಲ್ಲದೆ ಅವರು ಪ್ರತ್ಯೇಕವಾಗಿ ಶಾಸಕರೊಂದಿಗೆ ಚರ್ಚೆ ಕೂಡಾ ನಡೆಸುವವರಿದ್ದರು.ಆನಂದ್ ಸಿಂಗ್, ಕಂಪ್ಲಿ ಗಣೇಶ್ ಅವರ ನಡುವೆ ರಾತ್ರಿಯಿಡಿ ಮಾತಿನ ಚಕಮಕಿ ನಡೆದಿದೆ.ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಮೈತ್ರಿ ಸರ್ಕಾರ ಸಂಕಷ್ಟದಲ್ಲಿರುವಾಗಲೇ ಕೈ ಶಾಸಕರು ಪರಸ್ಪರ ಬಡಿದಾಡಿಕೊಂಡಿರುವುದು ಪಕ್ಷದ ವರ್ಚಸ್ಸಿಗೆ ಧಕ್ಕೆಯುಂಟಾಗಿದೆ. ಬಂಡಾಯ, ಭಿನ್ನಮತ ಪರಿಹರಿಸುವ ನಿಟ್ಟಿನಲ್ಲಿ ಹೈಕಮಾಂಡ್ ನಾಯಕರು ಹರಸಾಹಸ ಪಡುತ್ತಿದ್ದರೆ, ಈ ಶಾಸಕರುಗಳ ಫೈಟಿಂಗ್ ಹೊಸ ತಲೆನೋವು ತಂದಿಟ್ಟಿದೆ. ನಾವು ಜನಪ್ರತಿನಿಧಿಗಳು ಎಂಬುದನ್ನು ಮರೆತು ಈ ರೀತಿ ವರ್ತಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಇಬ್ಬರ ನಡುವೆ ಜಗಳವಾಗಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಅವರ ಕುಟುಂಬಗಳವರು ಕಂಗಾಲಾಗಿದ್ದಾರೆ.ಶಾಸಕರು ಕುಟುಂಬದವರಿಗೆ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಅವರ ಸಂಬಂಧಿಕರು ಡಿ.ಕೆ.ಶಿವಕುಮಾರ್ ಅವರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಯಾವುದೇ ಗಲಾಟೆಯಿಲ್ಲ:

ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಲಸಂಪನ್ಮೂಲ ಸಚಿವ ಹಾಗೂ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್ ಅವರು, ಈ ರೀತಿಯ ಯಾವುದೇ ಗಲಾಟೆ ನಡೆದಿಲ್ಲ. ಶಾಸಕರ ನಡುವೆ ಜಗಳ, ಹಲ್ಲೆ ನಡೆದಿಲ್ಲ. ಇದು ಕೇವಲ ಊಹಾಪೋಹ.ನಾವೆಲ್ಲ ಜೊತೆಯಲ್ಲೇ ಇದ್ದೇವೆ. ಶಾಸಕರಾದ ಕಂಪ್ಲಿ ಗಣೇಶ್, ಆನಂದ್ ಸಿಂಗ್ ಮಾಧ್ಯಮದ ಎದುರು ಬಂದು ಮಾತನಾಡಲಿದ್ದಾರೆ ಎಂದು ಹೇಳಿದರು.ಆನಂದ್ ಸಿಂಗ್ ಅವರು, ಕುಟುಂಬದವರೊಂದಿಗೆ ಮದುವೆ ಸಮಾರಂಭಕ್ಕೆ ತೆರಳಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ