ಬೆಂಗಳೂರು, ಜ.15- ಆಡಳಿತ ಪಕ್ಷದ ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸುವ ಪ್ರಯತ್ನವನ್ನು ವಿಫಲಗೊಳಿಸಲು ಸಾಧ್ಯವಿರುವ ಎಲ್ಲ ಕಾರ್ಯತಂತ್ರಗಳನ್ನು ರೂಪಿಸುವ ಬಗ್ಗೆಯೂ ಉಭಯ ನಾಯಕರು ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಖಾಸಗಿ ಹೊಟೇಲ್‍ನಲ್ಲಿ ವೇಣುಗೋಪಾಲ್ ಮತ್ತು ಕುಮಾರಸ್ವಾಮಿ ಭೇಟಿಯಾಗಿ ಪ್ರಚಲಿತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಸಂಪುಟ ವಿಸ್ತರಣೆ ಹಾಗೂ ನಿಗಮ-ಮಂಡಳಿಗಳ ನೇಮಕ ಪ್ರಕ್ರಿಯೆ ನಂತರ ಉಂಟಾಗಿರುವ ಗೊಂದಲದ ಪರಿಸ್ಥಿತಿ ಬಗ್ಗೆ ಗಂಭೀರ ಚರ್ಚೆ ನಡೆಸಲಿದ್ದಾರೆ. ಸರ್ಕಾರಕ್ಕೆ ಎದುರಾಗಲಿರುವ ಗಂಡಾಂತರವನ್ನು ಯಾವ ರೀತಿ ನಿವಾರಣೆ ಮಾಡಬೇಕು, ಪರಿಹಾರೋಪಾಯಗಳೇನು ಎಂಬುದರ ಬಗ್ಗೆಯೂ ಚರ್ಚಿಸಿ ತೀರ್ಮಾನ ಮಾಡಲಿದ್ದಾರೆ.
ಕಾಂಗ್ರೆಸ್‍ನ ಅತೃಪ್ತ ಶಾಸಕರನ್ನು ಸಮಾಧಾನಪಡಿಸಿ ಸರ್ಕಾರಕ್ಕೆ ಯಾವುದೇ ಅಡೆತಡೆ ಉಂಟಾಗದಂತೆ ಕ್ರಮ ಕೈಗೊಳ್ಳುವುದು, ಜತೆಗೆ ಯಾವುದೇ ಭಿನ್ನಾಭಿಪ್ರಾಯ, ಸಮಸ್ಯೆಗಳಿಲ್ಲದಂತೆ ಸರ್ಕಾರ ಮುನ್ನಡೆಸುವ ಬಗ್ಗೆಯೂ ಸಮಾಲೋಚನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕುಮಾರಸ್ವಾಮಿ ಅವರ ಭೇಟಿಗೂ ಮುನ್ನ ವೇಣುಗೋಪಾಲ್ ಅವರು ಕಾಂಗ್ರೆಸ್ ನಾಯಕರುಗಳೊಂದಿಗೆ ಮಾತುಕತೆ ನಡೆಸಿ ರಾಜಕೀಯ ಪರಿಸ್ಥಿತಿಯ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಆಡಳಿತ ಪಕ್ಷದ ಶಾಸಕರನ್ನು ಸೆಳೆಯಲು ಬಿಜೆಪಿ ಆಪರೇಷನ್ ಕಮಲದ ಪ್ರಯತ್ನ ಮಾಡುತ್ತಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಸಂಪರ್ಕಿಸಿ ಸಲಹೆ ಹಾಗೂ ಮಾರ್ಗದರ್ಶನ ಪಡೆದಿದ್ದಾರೆಂದು ಮೂಲಗಳು ತಿಳಿಸಿವೆ.