ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆಯಲಿರುವ ಪಕ್ಷೇತರ ಶಾಸಕರು

ಬೆಂಗಳೂರು, ಜ.15-ರಾಣೆಬೆನ್ನೂರಿನ ಪಕ್ಷೇತರ ಶಾಸಕ ಆರ್.ಶಂಕರ್, ಮುಳಬಾಗಿಲಿನ ಎಚ್.ನಾಗೇಶ್ ಈ ಇಬ್ಬರೂ ಶಾಸಕರು ಸಮ್ಮಿಶ್ರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯಲು ತೀರ್ಮಾನಿಸಿದ್ದಾರೆ.

ಇಂದು ರಾಜ್ಯಪಾಲ ವಿ.ಆರ್.ವಾಲ ಅವರನ್ನು ಭೇಟಿ ಮಾಡಲಿರುವ ಶಾಸಕರು ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆಯಲಿದ್ದೇವೆ ಎಂದು ಪತ್ರ ಸಮೇತ ನೀಡಲಿದ್ದಾರೆ.

ಈಗಾಗಲೇ ರಾಜ್ಯಪಾಲರ ಭೇಟಿಗೆ ಶಾಸಕರು ಸಮಯಾವಕಾಶ ಕೋರಿದ್ದಾರೆ.ಯಾವುದೇ ಸಂದರ್ಭದಲ್ಲಿ ರಾಜಭವನದಿಂದ ಬರಬಹುದಾದ ದೂರವಾಣಿ ಕರೆಯನ್ನು ಎದುರು ನೋಡುತ್ತಿದ್ದಾರೆ.

ಆದರೆ, ಈ ಇಬ್ಬರೂ ಶಾಸಕರು ಬೆಂಬಲ ವಾಪಸ್ ಪಡೆಯುವುದರಿಂದ ಸರ್ಕಾರದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಏಕೆಂದರೆ, ಸಮ್ಮಿಶ್ರ ಸರ್ಕಾರಕ್ಕೆ ಈಗಿನ ಪರಿಸ್ಥಿತಿಯಲ್ಲಿ 118 ಶಾಸಕರ ಬೆಂಬಲವಿದೆ. ವಿಧಾನಸಭೆಯಲ್ಲಿ ಯಾವುದೇ ಸರ್ಕಾರಕ್ಕೆ ಸರಳ ಬಹುಮತವಾಗಿ 113 ಶಾಸಕರನ್ನು ಹೊಂದಿದ್ದರೆ ಸಾಕು. ಇಂದು ಈ ಇಬ್ಬರು ರಾಜೀನಾಮೆ ನೀಡಿದರೆ ಒಂದೆರಡು ದಿನಗಳಲ್ಲಿ ಅತೃಪ್ತ ಶಾಸಕರು ಇದೇ ಹಾದಿ ತುಳಿಯುವ ಸಂಭವವಿದೆ ಎನ್ನಲಾಗುತ್ತಿದೆ.

ಈ ಹಿಂದೆ ಆರ್.ಶಂಕರ್ ಸರ್ಕಾರಕ್ಕೆ ಬೆಂಬಲ ನೀಡಿದ್ದರಿಂದ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗಿತ್ತು.ಆದರೆ, ಇತ್ತೀಚೆಗೆ ಸಂಪುಟ ಪುನಾರಚನೆ ಸಂದರ್ಭದಲ್ಲಿ ಅವರನ್ನು ಕೈ ಬಿಡಲಾಗಿತ್ತು.ಹೀಗಾಗಿ ಕಾಂಗ್ರೆಸ್ ಮೇಲೆ ಅವರು ಮುನಿಸಿಕೊಂಡಿದ್ದಾರೆ.ಇನ್ನು ಸರ್ಕಾರ ರಚನೆಯಾದ ವೇಳೆಯೇ ಮುಳಬಾಗಿಲು ಶಾಸಕ ನಾಗೇಶ್ ಅವರಿಗೆ ಸಚಿವ ಸ್ಥಾನದ ಆಶ್ವಾಸನೆ ನೀಡಲಾಗಿತ್ತು.

ಕೊನೆ ಕ್ಷಣದಲ್ಲಿ ಅವರನ್ನು ಕೈಬಿಟ್ಟಿದ್ದರಿಂದ ಅವರು ಕೂಡ ಸರ್ಕಾರದ ಮೇಲೆ ಕೆಂಡ ಕಾರುತ್ತಿದ್ದರು.ಒಂದು ವೇಳೆ ಶಂಕರ್ ಮತ್ತು ನಾಗೇಶ್ ಇಂದು ಬೆಂಬಲ ವಾಪಸ್ ಪಡೆದರೆ ಭಿನ್ನಮತೀಯರು ಕೂಡ ಯಾವುದೇ ಕ್ಷಣದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ