ಬೆಂಗಳೂರು,ಜ.13-. ಮಲ್ಲೇಶ್ವರದ ಉದ್ಯಮಿ ಸುಳ್ಳಿಮಡ ಕಾರ್ತಿಕ್ ಕುಶಾಲಪ್ಪ ಮತ್ತು ಸಪ್ನಾ ಅವರ ಮದುವೆ ಡಿ.2ರಂದು ನಿಶ್ಚಯವಾಗಿತ್ತು. ಲಗ್ನ ಪತ್ರಿಕೆ ಮುದ್ರಣ ಮಾಡಿಸಿದ್ದು, ಅದರಲ್ಲಿ ಸಪ್ನಾ ಅವರ ತಂದೆ ನಾಗಂಡ ಭೀಮಯ್ಯ ಮತ್ತು ಶಾಂತಿ ಎಂದು ನಮೂದಿಸಲಾಗಿತ್ತು.
ಇದನ್ನು ಗಮನಿಸಿದ ಕಾರ್ಯಪ್ಪ ಎಂಬಾತ ವಧುವಿನ ತಂದೆಗೆ ಕರೆ ಮಾಡಿ ನಾನು ನಾಗಂಡ ಕುಟುಂಬದ ಮುಖ್ಯಸ್ಥ. ನಿಮ್ಮ ಮಗಳ ಲಗ್ನ ಪತ್ರಿಕೆಯಲ್ಲಿ ನನ್ನ ಮನೆತನ(ನಾಗಂಡ)ದ ಹೆಸರು ಬಳಸಿಕೊಂಡು ದುರುಪಯೋಗಪಡಿಸಿಕೊಂಡಿದ್ದೀರಾ ಎಂದು ಪ್ರಶ್ನಿಸಿದ್ದಲ್ಲದೆ ಲಗ್ನ ಪತ್ರಿಕೆಯಿಂದ ನಾಗಂಡ ಹೆಸರನ್ನು ತೆಗೆಯಬೇಕೆಂದು ಒತ್ತಾಯಿಸಿದ್ದರು.
ಈಗಾಗಲೇ ಸಂಬಂಧಿಕರು, ಸ್ನೇಹಿತರಿಗೆ ಆಮಂತ್ರಣ ಪತ್ರಿಕೆ ವಿತರಿಸಲಾಗಿದೆ ಎಂದು ವಧುವಿನ ಕಡೆಯವರು ಸಮಜಾಯಿಷಿ ನೀಡಿದರೂ 5 ಲಕ್ಷ ರೂ.ಕೊಡುವಂತೆ ಕಾರ್ಯಪ್ಪ ಬೇಡಿಕೆ ಇಟ್ಟಿದ್ದರು. ಅಷ್ಟೇ ಅಲ್ಲದೆ ವರನ ಕಡೆಯವರಿಗೂ ಕರೆ ಮಾಡಿ ಮದುವೆ ನಿಲ್ಲಿಸುವುದಾಗಿ ಬೆದರಿಕೆವೊಡ್ಡಿದ್ದರು. ಈ ಎಲ್ಲ ಅಡೆತಡೆಗಳ ನಡುವೆಯೂ ನಿಗದಿತ ಸಮಯದಲ್ಲಿ ಮದುವೆ ನೇರವೇರಿತ್ತು.
ಆ ನಂತರ ವಧು ಮತ್ತು ವರನ ಕಡೆಯವರು ಮದುವೆಗೆ ಬಂದಿದ್ದ ಬಂಧುಬಳಗಕ್ಕೆ ಕೃತಜ್ಞತೆ ತಿಳಿಸಲು ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದರು.
ಇದರಿಂದ ಸಿಟ್ಟಿಗೆದ್ದ ಆರೋಪಿ ಕಾರ್ಯಪ್ಪ, ಡಿ.11ರ ಸಂಜೆ 7 ಗಂಟೆಗೆ ಮಲ್ಲೇಶ್ವರದಲ್ಲಿರುವ ನಮ್ಮ ಮನೆಗೆ ನುಗ್ಗಿ ಪತ್ನಿ ಸಪ್ನಾ ಮತ್ತು ಅವರ ಅತ್ತೆ ಜೊತೆ ಜಗಳ ಮಾಡಿದ್ದಾರೆ ಎಂದು ಕಾರ್ತಿಕ್ಕುಶಾಲಪ್ಪ ಪೆÇಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೆಲವರನ್ನು ಠಾಣೆಗೆ ಕರೆತಂದು ಹೇಳಿಕೆಗಳನ್ನು ಪಡೆದಿದ್ದಾರೆ.