ಇಬ್ಬರು ಕಾಂಗ್ರೇಸ್ ಶಾಸಕರನ್ನು ಸೆಳೆಯಲು ಮುಂದಾಗಿರುವ ಬಿಜೆಪಿ

ಬೆಂಗಳೂರು,ಜ.13- ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಲು ಮುಂದಾಗಿರುವ ಬಿಜೆಪಿ ಕಾಂಗ್ರೆಸ್‍ನ ಇಬ್ಬರು ಶಾಸಕರನ್ನು ಸೆಳೆಯಲು ಮುಂದಾಗಿದೆ.

ಕಲಬುರಗಿ ಜಿಲ್ಲೆ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಶಾಸಕ ಉಮೇಶ್ ಜಾದವ್ ಮತ್ತು ಚಿಕ್ಕೋಡಿ-ಸದಲಗ ಕ್ಷೇತ್ರದ ಶಾಸಕ ಹಾಗೂ ವಿಧಾನಸಭೆಯ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿಯನ್ನು ಪಕ್ಷಕ್ಕೆ ಕರೆತರಲು ವೇದಿಕೆ ಸಿದ್ದಗೊಂಡಿದೆ.

ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಸಂಸದೀಯ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ವಿರುದ್ದ ಈ ಬಾರಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ.

ಉಮೇಶ್ ಜಾದವ್ ಕಲಬುರಗಿ ಜಿಲ್ಲೆಯಲ್ಲಿ ಪ್ರಭಾವಿ ಲಂಬಾಣಿ ಸಮುದಾಯದ ಮುಖಂಡ. ಜಿಲ್ಲೆಯಲ್ಲಿ ಅವರ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಅವರನ್ನು ಪಕ್ಷಕ್ಕೆ ಸೆಳೆದು ಖರ್ಗೆ ವಿರುದ್ಧ ಕಣಕ್ಕಿಳಿಸಲು ಕಮಲ ನಾಯಕರು ಲೆಕ್ಕಾಚಾರ ಹಾಕಿದ್ದಾರೆ.

ಉಮೇಶ್ ಜಾದವ್ ಈಗಾಗಲೇ ತಮ್ಮ ಬೆಂಬಲಿಗರ ಜೊತೆ ಬಿಜೆಪಿ ಸೇರ್ಪಡೆ ಕುರಿತಂತೆ ಚರ್ಚೆ ನಡೆಸಿದ್ದಾರೆ.ಇತ್ತೀಚೆಗೆ ಅವರಿಗೆ ಆಹಾರ ಮತ್ತು ಉಗ್ರಾಣ ನಿಗಮದ ಅಧ್ಯಕರನ್ನಾಗಿಯೂ ನೇಮಿಸಲಾಗಿತ್ತು.

ಶುಕ್ರವಾರ ಜಾದವ್ ಅಧಿಕಾರ ಸ್ವೀಕರಿಸಬೇಕಿತ್ತು.ಆದರೆ ಇದ್ದಕ್ಕಿದ್ದಂತೆ ದಿಢೀರನೆ ಅಧಿಕಾರ ಸ್ವೀಕಾರವನ್ನು ಮುಂದೂಡಿರುವುದು ಪಕ್ಷ ಬಿಡಲಿದ್ದಾರೆ ಎಂಬ ಊಹಾಪೋಹಗಳು ಕೇಳಿಬಂದಿವೆ.

ಇನ್ನು ಚಿಕ್ಕೋಡಿ-ಸದಲಗ ಕ್ಷೇತ್ರದ ಶಾಸಕ ಗಣೇಶ್ ಹುಕ್ಕೇರಿ ಬಿಜೆಪಿಯತ್ತ ಮುಖ ಮಾಡಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ. ಏಕೆಂದರೆ ಅವರ ತಂದೆ ಪ್ರಕಾಶ್ ಹುಕ್ಕೇರಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದರು. ಕಾಂಗ್ರೆಸ್‍ನಲ್ಲಿ ನಿಷ್ಠಾವಂತರೆಂದೇ ಗುರುತಿಸಿಕೊಂಡಿರುವ ಗಣೇಶ್ ಹುಕ್ಕೇರಿ ಅವರ ಈ ನಡೆ ನಾನಾ ರೀತಿಯ ಸಂಶಯಗಳನ್ನು ಹುಟ್ಟುಹಾಕಿದೆ.

ಇದೇ 19ರಂದು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಕಾಂಗ್ರೆಸ್‍ಗೆ ಕೈಕೊಟ್ಟು ಬಿಜೆಪಿಯ ಕಮಲವನ್ನು ಮುಡಿಗೇರಿಸಿಕೊಳ್ಳಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ