ಶಾಸಕರ ಆಪ್ತ ಸಹಾಯಕರ ಬಗ್ಗೆ ವಿವಾದಾತ್ಮಕ ಹೇಳಿಕೆ, ಕ್ಷಮೆ ಕೇಳಿದ ಸಚಿವಾಲಾಯದ ನೌಕರರ ಸಂಘದ ಉಪಾಧ್ಯಕ್ಷ ರಮೇಶ್ ಗಣೇಶ್

Varta Mitra News

ಬೆಂಗಳೂರು,ಜ.8- ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗ ಶೆಟ್ಟಿ ಆಪ್ತ ಸಹಾಯಕ ಎಸ್.ಜೆ.ಮೋಹನ್‍ಕುಮಾರ್ ಪ್ರಕರಣದಲ್ಲಿ , ಶಾಸಕರ ಆಪ್ತ ಸಹಾಯಕರ ಬಗ್ಗೆ ವಿವಾದಾದತ್ಮಕ ಹೇಳಿಕೆ ನೀಡಿದ್ದ ಸಚಿವಾಲಯದ ನೌಕರ ಸಂಘದ ಉಪಾಧ್ಯಕ್ಷ ರಮೇಶ್‍ಗಣೇಶ್ ಕೊನೆಗೂ ಕ್ಷಮೆ ಕೇಳಿದ್ದಾರೆ.

ಶಾಸಕರ ಖಾಸಗಿ ಅಪ್ತ ಸಹಾಯಕರೇ ಚೇಲಾಗಳಂತೆ ವರ್ತನೆ ಮಾಡುತ್ತಿದ್ದಾರೆ.ಇವರಿಂದಲೇ ಸಚಿವರು ಮತ್ತು ಶಾಸಕರ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ರಮೇಶ್‍ಗಣೇಶ್ ಇತ್ತೀಚೆಗೆ ಸುದ್ದಿ ವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದರು.

ರಮೇಶ್ ಅವರ ಈ ಹೇಳಿಕೆಯನ್ನು ಶಾಸಕರ ಖಾಸಗಿ ಆಪ್ತ ಸಹಾಯಕರ ಸಂಘ ತೀವ್ರವಾಗಿ ಖಂಡಿಸಿತ್ತಲ್ಲದೆ ಬಹಿರಂಗ ಕ್ಷಮೆ ಕೇಳಬೇಕೆಂದು ಒತ್ತಾಯ ಮಾಡಿತ್ತು.

ನಿನ್ನೆ ಸಚಿವಾಲಯದಲ್ಲಿ ರಮೇಶ್ ಗಣೇಶ್ ಅವರನ್ನು ಶಾಸಕರ ಖಾಸಗಿ ಆಪ್ತ ಸಹಾಯಕರು, ಘೇರಾವ್ ಹಾಕಿ ಬಹಿರಂಗ ಕ್ಷಮೆ ಕೇಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಪಟ್ಟು ಹಿಡಿದಿದ್ದರು.ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ವ್ಯವಸ್ಥೆಯನ್ನೇ ದೂಷಣೆ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಒಂದು ವೇಳೆ ಪುಟ್ಟರಂಗಶೆಟ್ಟಿ ಕಚೇರಿ ನೌಕರ ಎಸ್.ಜೆ.ನೌಕರ ತಪ್ಪು ಮಾಡಿದ್ದರೆ ಅವರಿಗೆ ಕಾನೂನಿನ ಪ್ರಕಾರವೇ ಶಿಕ್ಷೆಯಾಗಲಿ. ಹಾಗೆಂದು ಎಲ್ಲ ಆಪ್ತ ಸಹಾಯಕರು ಇದೇ ರೀತಿ ಇರುತ್ತಾರೆ ಎಂದು ಬೊಟ್ಟು ಮಾಡುವುದು ಸರಿಯಲ್ಲ.

ಇದುವರೆಗೂ ಎಷ್ಟು ಮಂದಿ ಶಾಸಕರ ಖಾಸಗಿ ಆಪ್ತ ಸಹಾಯಕರ ಮೇಲೆ ಎಸಿಬಿ ಇಲ್ಲವೇ ಲೋಕಾಯುಕ್ತ ದಾಳಿಯಾಗಿದೆಯೇ?ಎಷ್ಟು ಜನರು ಹಣ ಸಮೇತ ಸಿಕ್ಕಿಕೊಂಡಿದ್ದಾರೆ.ಅವರು ಭ್ರಷ್ಟಾಚಾರ ಮಾಡಿರುವುದಕ್ಕೆ ನಿಮ್ಮ ಬಳಿ ದಾಖಲೆ ಇದೆಯೇ?ಯಾವ ಆಧಾರದ ಮೇಲೆ ನೀವು ಆರೋಪ ಮಾಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.

ಪ್ರತಿಭಟನೆಗೆ ಮಣಿದ ರಮೇಶ್ ಗಣೇಶ್, ತಾವು ಯಾವುದೇ ವೈಯಕ್ತಿಕ ದುರದ್ದೇಶ ಇಟ್ಟುಕೊಂಡು ಟೀಕೆ ಮಾಡಿಲ್ಲ. ಆತುರದಲ್ಲಿ ಈ ರೀತಿ ಹೇಳಿಕೆ ಕೊಟ್ಟಿದ್ದೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆಂದು ಹೇಳಿದ್ದಾರೆ.

ಶಾಸಕರುಗಳ ಖಾಸಗಿ ಆಪ್ತ ಸಹಾಯಕರ ಸಂಘದ ಅಧ್ಯಕ್ಷ ಅಮೀರ್ ಅಹಮ್ಮದ್ ಖಾನ್, ಪ್ರವೀಣ್ ಸಾಲಿಮಠ್, ಅಣಬೇರು ಜಯಪ್ರಕಾಶ್ ಮತ್ತಿತರರು ಘೇರಾವ್ ವೇಳೆ ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ