ಭಾರತ್ ಬಂದ್ ಹಿನ್ನಲೆ, ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ಸುಗಳ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು

ಬೆಂಗಳೂರು,ಜ.8- ಭಾರತ್ ಬಂದ್‍ಗೆ ಕರೆಕೊಟ್ಟಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾನಿರತರು ರಸ್ತೆಯಲ್ಲಿ ಸಂಚರಿಸುತ್ತಿದ್ದ ಎರಡು ಕೆಎಸ್‍ಆರ್‍ಟಿಸಿ ಹಾಗೂ ನಾಲ್ಕು ಬಿಎಂಟಿಸಿ ಬಸ್‍ಗಳ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿನಿಂದ ಬರುತ್ತಿದ್ದ ಕೆಎಸ್‍ಆರ್‍ಟಿಸಿ ವೋಲ್ವೊ ಬಸನ್ನು ಬೈಕ್‍ನಲ್ಲಿ ಬಂದ ಪ್ರತಿಭಟನಾಕಾರರು ತಡೆದು ಗಾಜಿಗೆ ಕಲ್ಲು ತೂರಿ ಜಖಂಗೊಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಕೊಟ್ಟಾಂನಿಂದ ತೆರಳುತ್ತಿದ ಕೆಎಸ್‍ಆರ್‍ಟಿಸಿ ಬಸ್‍ನ್ನು ಕೇರಳದಲ್ಲಿ ತಡೆದ ಪ್ರತಿಭಟನಾಕಾರರು ಬಸ್‍ಗೆ ಕಲ್ಲು ತೂರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ನಗರದಲ್ಲಿ ಸಂಚರಿಸುತ್ತಿದ್ದ ನಾಲ್ಕು ಬಿಎಂಟಿಸಿ ಬಸ್‍ಗಳ ಮೇಲೆ ಪ್ರತಿಭಟನಾನಿರತರು ಕಲ್ಲು ತೂರಿ ಜಖಂಗೊಳಿಸಿದ್ದಾರೆ. ನಗರದ ಯಶವಂತಪುರ, ಮಲ್ಲೇಶ್ವರ 18ನೇ ಕ್ರಾಸ್, ಕೆ.ಆರ್.ಪುರದ ಬಟ್ಟರಹಳ್ಳಿ ಹಾಗೂ ಮೆಜೆಸ್ಟಿಕ್‍ನಿಂದ ಇಂದು ಮುಂಜಾನೆ ಸಂಚರಿಸುತ್ತಿದ್ದ ಈ ಬಸ್‍ಗಳ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಿ ಬಸ್ ಸಂಚಾರವನ್ನು ತಡೆದಿದ್ದಾರೆ.

ಬಸ್‍ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಕೆಲವೆಡೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಒಟ್ಟಾರೆ ಶೇ.35ರಷ್ಟು ಕೆಎಸ್‍ಆರ್‍ಟಿಸಿ ಬಸ್ ಸಂಚರಿಸುತ್ತಿದ್ದರೆ ಶೇ.35ರಿಂದ 40ರಷ್ಟು ಬಿಎಂಟಿಸಿ ಬಸ್‍ಗಳು ಸಂಚರಿಸುತ್ತಿರುವುದು ಕಂಡುಬಂತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ