ಗುವಾಹತಿ: ಬಿಜೆಪಿ ಮೈತ್ರಿ ಕೂಟದಿಂದ ಅಸ್ಸಾಂನ ಪ್ರಾದೇಶಿಕ ಪಕ್ಷ ಅಸ್ಸಾಂ ಗಣ ಪರಿಷದ್ (ಎಜಿಪಿ) ಮೈತ್ರಿ ಮುರಿದುಕೊಂಡು ಹೊರ ನಡೆದಿದೆ.
ಪೌರತ್ವ (ತಿದ್ದುಪಡಿ) ಮಸೂದೆ 2016ಕ್ಕೆ ಸಂಬಂಧಿಸಿದಂತೆ ಕೇಂದ್ರ ಎನ್ ಡಿಎ ಸರ್ಕಾರದ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿ ಎಜಿಪಿ ಮೈತ್ರಿ ಕೂಟದಿಂದ ಹೊರ ಬಂದಿದೆ.
ಈ ಕುರಿತು ಮಾತನಾಡಿರುವ ಎಜಿಪಿ ಅಧ್ಯಕ್ಷ ಅತುಲ್ ಬೋರ, ಪೌರತ್ವ ಮಸೂದೆ ಕುರಿತಂತೆ ಈಗಾಗಲೇ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಿದ್ದೇನೆ. ಆದರೆ ಅವರು ಮಸೂದೆ ಕುರಿತು ತಮ್ಮ ನಿಲುವನ್ನು ಬದಲಿಸಿಕೊಳ್ಳುತ್ತಿಲ್ಲ. ಹಾಗಾಗಿ ನಾವು ಯಾವುದೇ ಆಯ್ಕೆ ಇಲ್ಲದೆ ಮೈತ್ರಿ ಮುರಿದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಅಸ್ಸಾಂ ಜನತೆ ಎಜಿಪಿ ಜತೆಗಿನ ಮೈತ್ರಿಯಿಂದ ಬಿಜೆಪಿಗೆ ಮತ ಹಾಕಿದ್ದಾರೆ. ಆದರೆ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಜನರಿಗೆ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಪ್ರಾದೇಶಿಕ ಪಕ್ಷವಾಗಿ ನಾವು ನಮ್ಮ ಜನತೆಯ ಭಾವನೆಗಳಿಗೆ ಗೌರವ ನೀಡಬೇಕು ಎಂದು ಬೋರ ತಿಳಿಸಿದ್ದಾರೆ.
ನೆರೆ ದೇಶಗಳಿಂದ ಅಕ್ರಮವಾಗಿ ಭಾರತಕ್ಕೆ ಬಂದು ನೆಲೆಸಿರುವ ಹಿಂದು ವಲಸಿಗರನ್ನು ನಮ್ಮ ದೇಶದಲ್ಲೇ ಉಳಿದುಕೊಳ್ಳಲು ಅವಕಾಶ ನೀಡಿ, ಪೌರತ್ವ ಮಸೂದೆಯಲ್ಲಿ ತಿದ್ದುಪಡಿ ತಂದರೆ ಬಿಜೆಪಿ ಜತೆ ಮೈತ್ರಿ ಮುರಿದುಕೊಳ್ಳುವುದಾಗಿ ಎಜಿಪಿ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿ ಪ್ರಫುಲ್ಲ ಕುಮಾರ್ ಈ ಹಿಂದೆಯೇ ತಿಳಿಸಿದ್ದರು.
2016ರ ಅಸ್ಸಾಂ ವಿಧಾನಸಭಾ ಚುನಾವಣೆಗೂ ಮುನ್ನ ಎಜಿಪಿ, ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿತ್ತು. ಚುನಾವಣೆಯಲ್ಲಿ 126 ಸ್ಥಾನದಲ್ಲಿ ಬಿಜೆಪಿ 61 ಸೀಟು ಗೆದ್ದರೆ, ಎಜಿಪಿ 14 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. 12 ಸೀಟು ಪಡೆದ ಬೋಡೊ ಪೀಪಲ್ ಫ್ರಂಟ್ ಪಕ್ಷವನ್ನೂ ಜತೆಗೂಡಿಸಿಕೊಂಡ ಬಿಜೆಪಿ ಒಟ್ಟು 87 ಸ್ಥಾನಗಳೊಂದಿಗೆ ಮೈತ್ರಿ ಸರ್ಕಾರ ರಚಿಸಿತ್ತು. ಈ ಮೈತ್ರಿಕೂಟದಿಂದ ಸದ್ಯ ಎಜಿಪಿ ಹೊರಬಂದಿರುವುದು ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ ಸರ್ಕಾರಕ್ಕೆ ಸ್ವಲ್ಪ ಮಟ್ಟಿನ ಹೊಡೆತ ಬೀಳಲಿದೆ ಎನ್ನಲಾಗಿದೆ.
BJP Loses Assam Ally. Asom Gana Parishad Exits Over Citizenship Bill