ಕೇಂದ್ರ ಸರ್ಕಾರವು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಾಳೆಯಿಂದ ಎರಡು ದಿನಗಳ ಕಾಲ ಭಾರತ್ ಬಂದ್

ಬೆಂಗಳೂರು,ಜ.7- ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ರಸ್ತೆ ಸುರಕ್ಷತೆ ಹಿಂಪಡೆಯುವುದು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಡಪಕ್ಷಗಳ ನೇತೃತ್ವದಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ಭಾರತ ಬಂದ್‍ಗೆ ಕರೆ ನೀಡಿದ್ದು, ಸಾರಿಗೆ ಸಂಚಾರ ಅಸ್ತವ್ಯಸ್ತವಾಗುವ ಸಾಧ್ಯತೆಯಿದೆ.

ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ಕಾರ್ಯಕರ್ತೆಯರು, ಅಖಿಲ ಕರ್ನಾಟಕ ಫೆಡರೇಷನ್ ಆಫ್ ಪೆಟ್ರೋಲಿಯಂ, ಅಂಗನವಾಡಿ ನೌಕರರ ಸಂಘ, ಅಖಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕ ಮಹಾಮಂಡಳ, ಅಕ್ಷರದಾಸೋಹ ಸಂಘಟನೆ ಸೇರಿದಂತೆ ಅನೇಕ ಸಂಘಟನೆಗಳು ಬಂದ್‍ಗೆ ಬೆಂಬಲ ಸೂಚಿಸಿರುವುದರಿಂದ ಬಹುತೇಕ ಎಲ್ಲ ಸೇವೆಗಳು ಸ್ತಬ್ಧಗೊಳ್ಳಲಿವೆ.

ಮುನ್ನೆಚ್ಚರಿಕೆ ಕ್ರಮವಾಗಿ ಮಕ್ಕಳ ಹಿತದೃಷ್ಟಿಯಿಂದ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ಆದರೆ ಸರ್ಕಾರಿ ಶಾಲಾಕಾಲೇಜುಗಳಿಗೆ ಆಯ ಜಿಲ್ಲೆಗಳ ಪರಿಸ್ಥಿತಿ ಅವಲೋಕಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚನೆ ಕೊಟ್ಟಿದೆ.

ಬಂದ್‍ಗೆ ಎಐಟಿಯುಸಿ, ಸಿಐಟಿಯು, ಐಎನ್‍ಟಿಯುಸಿ, ಎಲ್‍ಸಿಎಫ್, ನೇತೃತ್ವದಲ್ಲಿ ಬಂದ್ ನಡೆಯಲಿದೆ. ಆದರೆ ನಾಳಿನ ಬಂದ್‍ಗೆ ರಾಜ್ಯ ಸರ್ಕಾರದ ನಿಲುವು ಏನೆಂಬುದು ಈವರೆಗೂ ತಿಳಿದಿಲ್ಲ. ಮೂಲಗಳ ಪ್ರಕಾರ ಎಡಪಕ್ಷಗಳ ನೇತೃತ್ವದಲ್ಲಿ ನಡೆಯುತ್ತಿರುವ ಬಂದ್‍ಗೆ ಪರೋಕ್ಷವಾಗಿ ಬೆಂಬಲ ಸೂಚಿಸುವ ಸಾಧ್ಯತೆ ಇದೆ.

ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಓಲಾ, ಊಬರ್, ಟ್ಯಾಕ್ಸಿ, ಆಟೋ ಸಂಘಟನೆಗಳು ಇವರೆಗೂ ಅಧಿಕೃತವಾಗಿ ಬಂದ್‍ಗೆ ಬೆಂಬಲ ನೀಡುವ ಬಗ್ಗೆ ಘೋಷಣೆ ಮಾಡಿಲ್ಲ.
ಮೆಟ್ರೋ, ರೈಲು , ಊಬರ್ ಮತ್ತು ಓಲಾ ಸಂಚಾರ ಎಂದಿನಂತೆ ಇರಲಿದೆ ಎಂದು ತಿಳಿದುಬಂದಿದೆ.
ನಾಳಿನ ಬಂದ್‍ಗೆ ಬೆಂಗಳೂರು ಆಟೋ ಚಾಲಕರ ಸಂಘ ಸಂಸ್ಥೆಗಳ ಸಂಘಟನೆಗಳ ಒಕ್ಕೂಟ ಬೆಂಬಲ ನೀಡಿವೆ. ಆದರೆ ಆಟೋ ಸಂಚಾರ ಎಂದಿನಂತೆ ಇರುತ್ತದೆ ಎಂದು ಒಕ್ಕೂಟದ ಮುಖಂಡರು ತಿಳಿಸಿದ್ದಾರೆ.
ವಾಯುವ್ಯ, ಈಶಾನ್ಯ, ನೈರುತ್ಯ ಸಾರಿಗೆ ಸಂಸ್ಥೆಗಳು ಬಂದ್‍ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇರುವುದರಿಂದ ಪ್ರಯಾಣಿಕರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.

ಆ್ಯಂಬುಲೆನ್ಸ್, ಹಾಲಿನ ವಾಹನ, ದಿನಪತ್ರಿಕೆಗಳ ವಾಹನ, ಆಸ್ಪತ್ರೆ, ಔಷಧಿ ಮಳಿಗೆಗಳು ಹಾಗೂ ತರಕಾರಿ ಸಾಗಾಣಿಕೆ ವಾಹನಗಳಿಗೆ ಬಂದ್‍ನಿಂದ ವಿನಾಯ್ತಿ ನೀಡಲಾಗಿದೆ.
ನಾಳೆ ಬೆಂಗಳೂರಿನ ಫ್ರೀಡಂಪಾರ್ಕ್‍ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದ್ದು, ಕೇಂದ್ರ ಸರ್ಕಾರದ ಉದ್ದೇಶಿತ ರಸ್ತೆ ಸುರಕ್ಷತೆ ಕಾಯ್ದೆಯನ್ನು ಕೈ ಬಿಡಬೇಕೆಂದು ಕೇಂದ್ರ ಸರ್ಕಾರದ ಮೇಲೆ ವಿವಿಧ ಸಂಘಟನೆಗಳು ಒತ್ತಡ ಹಾಕಲಿವೆ.
ದೇಶವ್ಯಾಪಿ ಮುಷ್ಕರಕ್ಕೆ ಕರೆಕೊಟ್ಟಿರುವುದರಿಂದ ಕೆಎಸ್‍ಆರ್‍ಟಿಸಿಯ 8 ಸಾವಿರ, ಬಿಎಂಟಿಸಿ 6300, ಈಶಾನ್ಯ ಭಾಗದ 4000, ವಾಯುವ್ಯದ 4300 ಬಸ್‍ಗಳ ಸಂಚಾರ ಸ್ಥಗಿತವಾಗುವ ಸಾಧ್ಯತೆ ಇದೆ.

ಬಂದ್‍ಗೆ ಅಖಿಲ ಭಾರತ ಬ್ಯಾಂಕ್ ಸಿಬ್ಬಂದಿಗಳ ಒಕ್ಕೂಟ ಬೆಂಬಲ ನೀಡಿರುವುದರಿಂದ ಬ್ಯಾಂಕಿಂಗ್ ವ್ಯವಹಾರದ ಮೇಲೂ ಪರಿಣಾಮ ಬೀರಲಿದೆ.
ಬೇಡಿಕೆಗಳು:
ಸುಮಾರು 12 ಬೇಡಿಕೆಗಳನ್ನು ಮುಂದಿಟ್ಟಿರುವ ಸಂಘಟನೆಗಳು ಕೇಂದ್ರ ಸರ್ಕಾರದ ಉದ್ದೇಶಿತ ರಸ್ತೆ ಸುರಕ್ಷತಾ ಕಾಯ್ದೆಯನ್ನು ಕೈ ಬಿಡಬೇಕೆಂದು ಒತ್ತಾಯಿಸಿವೆ.
ಎಲ್ಲ ಕಾರ್ಮಿಕರಿಗೂ 18 ಸಾವಿರ ವೇತನ ನಿಗದಿಪಡಿಸಬೇಕು, ಗುತ್ತಿಗೆ ಕಾರ್ಮಿಕ ಪದ್ಧತಿ ನಿಷೇಧಿಸುವುದು, ಬಹುರಾಷ್ಟ್ರೀಯ ಕಂಪನಿಗಳ ಕಾರ್ಮಿಕ ಕಾಯ್ದೆ ತಿದ್ದುಪಡಿ ಮಾಡುವುದು ಸೇರಿದಂತೆ ಒಟ್ಟು 12 ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿವೆ.
*****
ಬಂದ್‍ಗೆ ಬೆಂಬಲ
ಅಖಿಲಭಾರತ ಲಾರಿ ಮಾಲೀಕರ ಸಂಘ
ಆಲ್ ಇಂಡಿಯಾ ಪೆಟ್ರೋಲ್ ಬಂಕ್ ಫೆಡರೇಷನ್
ಆಲ್ ಇಂಡಿಯಾ ಬ್ಯಾಂಕ್ ಯೂನಿಯನ್
ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು
ಗಾರ್ಮೆಂಟ್ಸ್ ನೌಕರರು
ಕೆಎಸ್‍ಆರ್‍ಟಿಸಿ, ಬಿಎಂಟಿಸಿ ನೌಕರರ ಒಕ್ಕೂಟ
ಬೀದಿ ಬದಿ ವ್ಯಾಪಾರಿಗಳ ಒಕ್ಕೂಟ

ಸೇವೆಗಳು ಲಭ್ಯ:
ಆಸ್ಪತ್ರೆಗಳು
ಔಷಧಿ ಮಳಿಗೆಗಳು
ಆ್ಯಂಬುಲೆನ್ಸ್
ತರಕಾರಿ ಮತ್ತು ಹಾಲಿನ ವಾಹನಕ್ಕೆ ವಿನಾಯ್ತಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ