ನಾಳೆಯಿಂದ ಎರಡು ದಿನ ಭಾರತ್ ಬಂದ್; ಈ 2 ದಿನ ಪ್ರಯಾಣ ಬೇಡ

ಬೆಂಗಳೂರು: ಮೋಟಾರು ವಾಹನ ಮಸೂದೆ, ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾರ್ಮಿಕ ಸಂಘಟನೆಗಳು ಮಂಗಳವಾರ ಹಾಗೂ ಬುಧವಾರ ಎರಡು ದಿನ ಮುಷ್ಕರಕ್ಕೆ ಕರೆ ಕೊಟ್ಟಿದೆ.
ಎಐಟಿಸಿ, ಐಎನ್‍ಟಿಯುಸಿ, ಸಿಐಟಿಯು ಸೇರಿದಂತೆ ಅಖಿಲ ಭಾರತ ಕಾರ್ಮಿಕ ಸಂಘಟನೆಗಳು ಕರೆಕೊಟ್ಟ ಬಂದ್ ಗೆ ಸಾರಿಗೆ ಒಕ್ಕೂಟಗಳು ಬೆಂಬಲ ನೀಡಿದ್ದು, ಈ ಹಿನ್ನಲೆಯಲ್ಲಿ  ಬಿಎಂಟಿಸಿ, ಕೆಎಸ್‍ಆರ್ ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮದ ಬಸ್‍ಗಳ ಓಡಾಟ ಇರಲ್ಲ.  ಒಟ್ಟು 26 ಸಾವಿರ ನಾಲ್ಕು ನಿಗಮದ ಬಸ್ ಸ್ತಬ್ಧವಾಗಲಿದೆ. ಅಂತೆಯೇ ಬಂದ್ ಗೆ ಎಆರ್ ಡಿಯು ಆಟೋ ಸಂಘಟನೆ ಬೆಂಬಲ ನೀಡಿದ್ದರಿಂದ ಬಹುತೇಕ ಆಟೋ ಸಂಚಾರ ಅನುಮಾನ. ಟ್ಯಾಕ್ಸಿ ಮಾಲೀಕರ ಸಂಘ ಕೂಡ ನೈತಿಕ ಬೆಂಬಲ ಕೊಟ್ಟಿದೆಯಾದರೂ ಟ್ಯಾಕ್ಸಿ ಸೇವೆಯಲ್ಲಿ ಗಮನಾರ್ಹ ವ್ಯತ್ಯಯ ಕಂಡುಬರುವುದಿಲ್ಲ.
ಇನ್ನು ಅಂಗನವಾಡಿ ನೌಕರರು ಮುಷ್ಕರದಲ್ಲಿ ಭಾಗಿಯಾಗುತ್ತಿದ್ದು ಅಂಗನವಾಡಿಗಳು ಬಂದ್ ಆಗಲಿವೆ. ಬ್ಯಾಂಕ್ ನೌಕರರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಲಕ್ಷಾಂತರ ಮಂದಿ ಗಾರ್ಮೆಂಟ್ಸ್ ನೌಕರರು ಬಂದ್ ನಲ್ಲಿ ಭಾಗವಹಿಸುತ್ತಿರುವುದರಿಂದ ಎಲ್ಲಾ ಫ್ಯಾಕ್ಟರಿಗಳು, ಗಾರ್ಮೆಂಟ್ಸ್ ಗಳು ಅಘೋಶಿತ ರಜೆ ನೀಡುವ ಸಾದ್ಯತೆ ಇದೆ.
ಇನ್ನು ಸಾರಿಗೆ ಒಕ್ಕೂಟವೇ ಬಂದ್ ಗೆ ಕರೆ ನೀಡಿರುವುದರಿಂದ ಕರ್ನಾಟಕದ ಕರಾವಳಿ ಭಾಗದಲ್ಲಿ ಖಾಸಗಿ ಬಸ್‍ಗಳ ಸಂಚಾರ ಕೂಡ ಸ್ಥಗಿತವಾಗಲಿದೆ. ಸರ್ಕಾರಿ ನೌಕರರು, ಚಿತ್ರೋದ್ಯಮದ ಮಂದಿ, ಬೀದಿ ಬದಿ ವ್ಯಾಪಾರಿಗಳು, ಎಪಿಎಂಸಿ ಬಂದ್ ಗೆ ನೈತಿಕ ಬೆಂಬಲ ಘೋಷಿಸಿದ್ದಾರೆ. ಓಲಾ, ಉಬರ್ ಬಂದ್ ಗೆ ನೈತಿಕ ಬೆಂಬಲ ನೀಡಿವೆ.
ತುರ್ತು ಸೇವೆಗಳು ಅಬಾಧಿತ
ಬಂದ್ ನಡೆಯುವ ಎರಡೂ ದಿನ ನಿತ್ಯದ ಅಗತ್ಯ ವಸ್ತುಗಳು, ತುರ್ತು ಸೇವೆಗಳಿಗೆ ಅವಕಾಶ ನೀಡಲಾಗಿದೆ. ಆಸ್ಪತ್ರೆಗಳು, ಮೆಡಿಕಲ್ ಶಾಪ್, ಆ್ಯಂಬುಲೆನ್ಸ್ ಸೇವೆಗಳು ಇರುತ್ತವೆ. ಬೆಳಗ್ಗೆ ಹಾಲು, ತರಕಾರಿ, ಪೇಪರ್ ಲಭ್ಯ ಇರುತ್ತವೆ. ಬಂದ್ ದಿನ ಕಾರ್ಮಿಕ ಸಂಘಟನೆಗಳು ಬೆಂಗಳೂರಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಿವೆ. ಟೌನ್ ಹಾಲ್, ಮಿನರ್ವ ವೃತ್ತದಿಂದ ಫ್ರೀಡಂಪಾರ್ಕ್ ವರೆಗೆ ನಡೆವ ರ್ಯಾಲಿಯಲ್ಲಿ ಲಕ್ಷಾಂತರ ಕಾರ್ಮಿಕರು ಪಾಲ್ಗೊಳ್ಳಲಿದ್ದು, ದೊಡ್ಡ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಸಂಭವಿಸೋ ಸಾಧ್ಯತೆ ಇದೆ.
ಇನ್ನು ಬಂದ್ ಕುರಿತು ಹೊಟೆಲ್ ಮಾಲೀಕರ ಒಕ್ಕೂಟ ಪ್ರತಿಕ್ರಿಯೆ ನೀಡಿಲ್ಲವಾದರೂ, ನಾಳೆ ಹೋಟೆಲ್ ಸೇವೆಯಲ್ಲಿ ವ್ಯತ್ಯಯವಾಗುವ ಸಾದ್ಯತೆ ಇದೆ. ಕೆಲ ಸ್ಥಳೀಯ ಹೊಟೆಲ್ ಗಳು ತೆರೆದು ಎಂದಿನಿಂದ ಗ್ರಾಹಕರಿಗೆ ಸೇವೆ ನೀಡುವ ಸಾಧ್ಯತೆಯೂ ಇದೆ. ಇನ್ನು ಶಾಲಾ ಕಾಲೇಜು ಬಂದ್ ಮಾಡುವ ನಿರ್ಧಾರ ಆಯಾ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಡಲಾಗಿದೆ.
ಏನಿರಲ್ಲ?
* ಬಿಎಂಟಿಸಿ, ಕೆಎಸ್‍ಆರ್ ಟಿಸಿ ಬಸ್ ಸೇವೆ
* ಆಟೋ, ಟ್ಯಾಕ್ಸಿ ಸಂಚಾರ ಅನುಮಾನ
* ಅಂಗನವಾಡಿ, ಬ್ಯಾಂಕ್ ಸೇವೆ
* ಗಾರ್ಮೆಂಟ್ಸ್, ಫ್ಯಾಕ್ಟರಿ ಕ್ಲೋಸ್
* ಕರಾವಳಿ ಭಾಗದಲ್ಲಿ ಖಾಸಗಿ ಬಸ್ ಸೇವೆ
ಏನಿರುತ್ತೆ ?
* ಆಸ್ಪತ್ರೆಗಳು, ಮೆಡಿಕಲ್ ಶಾಪ್
* ಆ್ಯಂಬುಲೆನ್ಸ್ ಸೇವೆ
* ಹಾಲು, ತರಕಾರಿ, ಪೇಪರ್
* ಮೆಟ್ರೋ ರೈಲು ಸೇವೆ

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ