ಬೆಂಗಳೂರು,ಜ.5- ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಪರಿಷ್ಕರಿಸಿ ಗ್ರಾಹಕರಿಗೆ ಹೊಸ ವರ್ಷದ ಬಿಸಿ ಮುಟ್ಟಿಸಿದ ಬೆನ್ನಲ್ಲೇ, ಇದೀಗ ರಾಜ್ಯ ಸರ್ಕಾರ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ಮೂಲಕ ಜನತೆಗೆ ಡಬಲ್ ಶಾಕ್ ಕೊಡಲು ಮುಂದಾಗಿದೆ.
ಸಾರಿಗೆ ಸಂಸ್ಥೆಗಳು ನಷ್ಟದ ಹಳಿಯಲ್ಲಿ ಇರುವ ಕಾರಣ ಸರಿದೂಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಶೇ.10ರಿಂದ 12ರಷ್ಟು ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಲು ತೀರ್ಮಾನಿಸಿದ್ದು, ಅಧಿಕೃತ ಆದೇಶ ಶೀಘ್ರದಲ್ಲಿ ಹೊರಬೀಳಲಿದೆ.
ಕಳೆದ ವಾರವಷ್ಟೇ ಬಸ್ ದರವನ್ನು ಹೆಚ್ಚಳ ಮಾಡಬೇಕೆಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು.
ಈಗಾಗಲೇ ಸಿಎಂ ಕುಮಾರಸ್ವಾಮಿ ಅವರು ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು, ಬಿಎಂಟಿಸಿ, ವಾಯುವ್ಯ, ಈಶಾನ್ಯ, ನೈರುತ್ಯ ಮತ್ತು ಆಗ್ನೇಯ ಸಾರಿಗೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ದರ ಏರಿಕೆ ಅನಿವಾರ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಹೀಗಾಗಿ ಒಂದೆರಡು ದಿನಗಳಲ್ಲಿ ಸರ್ಕಾರಿ ಸಾರಿಗೆ ಬಸ್ ದರವನ್ನು ಶೇ.10ರಿಂದ 12ರಷ್ಟು ಏರಿಕೆ ಮಾಡುವ ಮೂಲಕ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ.
ಸಾರಿಗೆ ಇಲಾಖೆಯು ಶೇ.18ರಷ್ಟು ದರವನ್ನು ಪರಿಷ್ಕರಣೆ ಮಾಡಬೇಕೆಂಬ ಪ್ರಸ್ತಾವನೆಯನ್ನು ಮುಂದಿಟ್ಟಿತ್ತು.ಆದರೆ ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಹೆಚ್ಚಳ ಮಾಡಿದರೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಬಹುದೆಂಬ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚರಿಕೆ ಹೆಜ್ಜೆ ಇಟ್ಟಿದೆ.
ಬಿಎಂಟಿಸಿ ಹೊರತುಪಡಿಸಿದರೆ ವಾಯುವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳು ಸುಮಾರು 650 ಕೋಟಿ ನಷ್ಟದಲ್ಲಿವೆ. ಇಲ್ಲಿ ಸಿಬ್ಬಂದಿಗೆ ಸಕಾಲಕ್ಕೆ ಸರಿಯಾಗಿ ವೇತನವನ್ನು ಕೊಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪ್ರಯಾಣದ ದರವನ್ನು ಹೆಚ್ಚಳ ಮಾಡಬೇಕೆಂಬ ಪ್ರಸ್ತಾವನೆಯನ್ನು ಮುಂದಿಟ್ಟಿತ್ತು.
ಡೀಸೆಲ್ ದರ ಪ್ರತಿ ಲೀಟರ್ಗೆ 53 ರೂ. ಇದ್ದಾಗ ಬಸ್ ದರವನ್ನು ಹೆಚ್ಚಳ ಮಾಡಲಾಗಿತ್ತು.ಈಗ ಡೀಸೆಲ್ ದರ ಲೀಟರ್ಗೆ 70 ರೂ.ಏರಿಕೆಯಾಗಿದ್ದರೆ ಟಿಕೆಟ್ ದರ ಮಾತ್ರ ಯಥಾಸ್ಥಿತಿಯಲ್ಲಿದೆ.
ಕಳೆದ 15 ದಿನಗಳಲ್ಲಿ ಲೀಟರ್ಗೆ 20 ಪೈಸೆ, 30 ಪೈಸೆ, 50 ಪೈಸೆ ಹಾಗೂ ಒಂದು ರೂ. ಕಡಿಮೆಯಾಗಿದ್ದರಿಂದ ಇಂದು ಡೀಸೆಲ್ ದರ 64 ರೂ.ಗೆ ಬಂದಿದೆ.ಇದರ ಜೊತೆಗೆ ಶುಕ್ರವಾರವಷ್ಟೇ ರಾಜ್ಯ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ದರವನ್ನು ಪರಿಷ್ಕರಣೆ ಮಾಡಿ ಹೆಚ್ಚಳ ಮಾಡಿದೆ.
ಹೀಗಾಗಿ ಬಸ್ ಪ್ರಯಾಣ ದರವನ್ನು ಏರಿಕೆ ಮಾಡದಿದ್ದರೆ ಸಂಸ್ಥೆಯನ್ನು ನಿರ್ವಹಣೆ ಮಾಡುವುದು ಕಷ್ಟಕರ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಟ್ಟಿದ್ದರು.
ಈ ಎಲ್ಲಾ ಸಾಧಕ-ಬಾಧಕಗಳನ್ನು ಗಮನಿಸಿರುವ ಕುಮಾರಸ್ವಾಮಿ ಅವರು ಒಲ್ಲದ ಮನಸಿನಿಂದಲೇ ದರ ಏರಿಕೆಗೆ ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಸಾರಿಗೆ ಇಲಾಖೆ ಬಸ್ ಪ್ರಯಾಣವನ್ನು ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಇದಕ್ಕೆ ಅನುಮೋದನೆ ನೀಡಿದ್ದರು.ಆದರೆ ಆ ಸಂದರ್ಭದಲ್ಲಿ ರಾಜ್ಯದ ಎರಡು ವಿಧಾನಸಭೆ ಮತ್ತು ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ನಿಗದಿಯಾಗಿತ್ತು.
ಚುನಾವಣಾ ಹೊಸ್ತಿಲಲ್ಲಿ ಬಸ್ ದರವನ್ನು ಏರಿಕೆ ಮಾಡಿದರೆ ಮತದಾರರ ಮುನಿಸಿಕೊಂಡು ಸರ್ಕಾರಕ್ಕೆ ಬಿಸಿ ಮುಟ್ಟಿಸಬಹುದೆಂಬ ಭೀತಿಯಿಂದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ಹೊರಡಿಸಿದ ಆದೇಶವನ್ನು ಅಂದೇ ಹಿಂಪಡೆಯುವಂತೆ ಕುಮಾರಸ್ವಾಮಿ ಸೂಚಿಸಿದ್ದರು.
ಖಾಸಗಿ ಬಸ್ ಪ್ರಯಾಣದ ದರ ಹೆಚ್ಚಳ: ಸರ್ಕಾರಿ ಬಸ್ ಪ್ರಯಾಣ ದರ ಏರಿಕೆಯಾದರೆ ಖಾಸಗಿಯವರೂ ಕೂಡ ಪ್ರಯಾಣ ದರವನ್ನು ಹೆಚ್ಚಳ ಮಾಡಲು ತೆರೆಮರೆಯಲ್ಲಿ ಸಜ್ಜಾಗಿದ್ದಾರೆ.
ಡೀಸೆಲ್ ದರ ನಿರಂತರವಾಗಿ ಏರಿಕೆಯಾಗುತ್ತಿದ್ದು, ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಖಾಸಗಿ ಬಸ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
ಸರ್ಕಾರ ಬಸ್ ಪ್ರಯಾಣ ದರ ಏರಿಕೆ ಮಾಡುವುದನ್ನೇ ತುದಿಗಾಲಲ್ಲಿ ನಿಂತು ಕಾಯುತ್ತಿರುವ ಖಾಸಗಿಯವರು ಮರುಕ್ಷಣವೇ ದರ ಹೆಚ್ಚಿಸಲು ಮುಂದಾಗಿದ್ದಾರೆ.