ಬೆಂಗಳೂರು, ಡಿ.31-ಬಾಲ ಮಂದಿರದಲ್ಲಿ ರಾತ್ರಿ ಊಟ ಮಾಡಿ ಅಸ್ವಸ್ಥಗೊಂಡಿದ್ದ ಆರು ಮಕ್ಕಳಿಗೆ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಅವರೆಲ್ಲ ಚೇತರಿಸಿಕೊಂಡಿದ್ದಾರೆ.
ನಗರದ ಹೊಸೂರು ರಸ್ತೆ, ಡೈರಿ ಸರ್ಕಲ್ ಸಮೀಪವಿರುವ ಬಾಲಮಂದಿರದಲ್ಲಿ 103 ಮಕ್ಕಳಿದ್ದು, ರಾತ್ರಿ ಇವರೆಲ್ಲ ಊಟ ಮಾಡಿದ್ದಾರೆ.
ಸ್ವಲ್ಪ ಸಮಯದ ಬಳಿಕ ಆರು ಮಕ್ಕಳು ವಾಂತಿ ಮಾಡಿಕೊಂಡಿದ್ದಾರೆ. ಇದನ್ನು ಗಮನಿಸಿದ ಬಾಲಮಂದಿರದವರು ಆಹಾರದಲ್ಲಿ ವ್ಯತ್ಯಯವಾಗಿರಬಹುದೆಂದು ಭಾವಿಸಿ ತಕ್ಷಣ ಮುನ್ನೆಚ್ಚರಿಕೆಯಾಗಿ ಎಲ್ಲಾ ಮಕ್ಕಳನ್ನು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವೈದ್ಯರು ಎಲ್ಲಾ ಮಕ್ಕಳನ್ನು ಪರೀಕ್ಷಿಸಿ ಔಷಧಿ ನೀಡಿದ್ದು, ಇದೀಗ ಮಕ್ಕಳೆಲ್ಲರೂ ಗುಣಮುಖರಾಗುತ್ತಿದ್ದಾರೆ.ವಿಷಯ ತಿಳಿದ ಜಿಲ್ಲಾಧಿಕಾರಿ ವಿಜಯ್ಶಂಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.
ಮಕ್ಕಳು ಸೇವಿಸಿದಂತಹ ರಾತ್ರಿ ಊಟವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.ಪ್ರಯೋಗಾಲಯದ ವರದಿ ಬಂದ ನಂತರವಷ್ಟೆ ಮಕ್ಕಳು ಅಸ್ವಸ್ಥರಾಗಲು ನಿಖರವಾದ ಕಾರಣ ತಿಳಿದುಬರಲಿದೆ.