ಭಾವನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ ಬಾಮೈದುನ

ನೆಲಮಂಗಲ,ಡಿ.31- ಕುಡಿದು ಮನೆ ಬಳಿ ಗಲಾಟೆ ಮಾಡುತ್ತಿದ್ದನೆಂದು ಭಾವ ದೂರು ಕೊಟ್ಟಿದ್ದರಿಂದ ಕೋಪಗೊಂಡ ಬಾಮೈದುನ ರಾತ್ರಿ ಚಾಕುವಿನಿಂದ ಭಾವನನ್ನೇ ಇರಿದು ಕೊಲೆ ಮಾಡಿರುವ ದಾರುಣ ಘಟನೆ ಟೌನ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಪಟ್ಟಣದ ದೇವಾಂಗ ಬೀದಿ ನಿವಾಸಿ ಗಣೇಶ್(45) ಕೊಲೆಯಾದ ದುರ್ದೈವಿ.

ಗೋಬಿ ಮಂಚೂರಿ ವ್ಯಾಪಾರ ಮಾಡಿಕೊಂಡಿದ್ದ ಆರೋಪಿ ಆನಂದ್ ವ್ಯಾಪಾರ ಮುಗಿಸಿ ರಾತ್ರಿ ಪ್ರತಿನಿತ್ಯ ಕುಡಿದು ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದನಲ್ಲದೆ ತನ್ನ ಅಕ್ಕನ ಮನೆ ಬಳಿಯೂ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನು.

ಇದರಿಂದ ರೋಸಿಹೋಗಿದ್ದ ಅಕ್ಕ ಮತ್ತು ಭಾವ ಈತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.ಪೊಲೀಸರು ಆನಂದನನ್ನು ಠಾಣೆ ಕರೆದು ಬುದ್ದಿ ಮಾತು ಹೇಳಿ ಈ ರೀತಿ ನಡೆದುಕೊಳ್ಳಬಾರದೆಂದು ಹೇಳಿ ಕಳುಹಿಸಿದ್ದರು.

ಇಷ್ಟಕ್ಕೆ ಸುಮ್ಮನಾಗದ ಆನಂದ್ ನನ್ನ ಮೇಲೆಯೇ ದೂರು ಕೊಡುತ್ತೀಯ ಎಂದು ಠಾಣೆಯಿಂದ ಹೊರಬಂದು ಪೊಲೀಸರ ಮಾತಿಗೂ ಬೆಲೆ ಕೊಡದೆ ಮದ್ಯದಂಗಡಿಗೆ ಹೋಗಿ ಮದ್ಯ ಸೇವಿಸಿ ರಾತ್ರಿ 11 ಗಂಟೆ ಸಮಯದಲ್ಲಿ ಭಾವನ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದಾನೆ.

ಮನೆಯೊಳಗಿನಿಂದ ಅಕ್ಕ-ಭಾವ ಹೊರಬರುತ್ತಿದ್ದಂತೆಯೇ ತನ್ನ ಅಕ್ಕನ ಗಂಡ ಅಂತಲೂ ನೋಡದೆ ಏಕಾಏಕಿ ಚಾಕುವಿನಿಂದ ಭಾವನ ಬೆನ್ನಿಗೆ ಬಲವಾಗಿ ಇರಿದಿದ್ದಾನೆ.

ನೆರೆಹೊರೆಯವರು ತಕ್ಷಣ ಇರಿಕ್ಕೊಳಗಾಗಿದ್ದ ಗಣೇಶ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು.

ಘಟನೆ ನಡೆಯುತ್ತಿದ್ದಂತೆ ಆರೋಪಿ ಆನಂದ್ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಆರೋಪಿ ಆನಂದ್‍ಗಾಗಿ ಶೋಧ ಕೈಗೊಂಡಿದ್ದಾರೆ.

ಪೊಲೀಸರ ಭಯವಿಲ್ಲ:
ನೆಲಮಂಗಲ ವ್ಯಾಪ್ತಿಯಲ್ಲಿ ಕ್ಷುಲ್ಲಕ ಕಾರಣಕ್ಕೂ ಗಲಾಟೆ ನಡೆದು ಪ್ರಾಣ ಕಳೆದುಕೊಳ್ಳುತ್ತಿರುವುದು ವಿಷಾದಕರ.ಕಾರಣ ಇಲ್ಲಿನವರಿಗೆ ಪೆÇಲೀಸರ ಭಯವಿಲ್ಲ ಎಂಬ ಆರೋಪ ಕೇಳಿಬಂದಿದೆ.

ಕುಟುಂಬ ಕಲಹ, ಮಕ್ಕಳ ವಿಚಾರಕ್ಕೆ ಈ ವ್ಯಾಪ್ತಿಯಲ್ಲಿ ಗಲಾಟೆ ನಡೆದ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ, ಆ ಕ್ಷಣದಲ್ಲೇ ದೂರು ಕೊಟ್ಟವನ ಮೇಲೆಹಲ್ಲೆ, ಇರಿತದಂತಹ ಘಟನೆ ನಡೆಯುತ್ತಿರುವುದು ಗಮನಿಸಿದರೆ ಇವರಿಗೆ ಪೊಲೀಸರ ಭಯವಿಲ್ಲ ಎಂಬುದು ಗೊತ್ತಾಗುತ್ತದೆ.

ಇನ್ನು ಮುಂದಾದರೂ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸರು ಈ ವ್ಯಾಪ್ತಿಯಲ್ಲಿ ಅಪರಾಧಗಳು ನಡೆಯದಂತೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ