ಬೆಂಗಳೂರು, ಫೆ.12- ವ್ಯಕ್ತಿಯೊಬ್ಬರನ್ನು ಬೆದರಿಸಿ ದುಬಾರಿ ಬೆಲೆಯ ಮೊಬೈಲ್ ದರೋಡೆ ಮಾಡಿದ 12 ಗಂಟೆಯೊಳಗೆ ಸಿ.ಕೆ.ಅಚ್ಚುಕಟ್ಟು ಠಾಣೆ ಪೋಲೀಸರು ಕಾರ್ಯಾಚರಣೆ ನಡೆಸಿ 5 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಜಿತ್ (19), ಚಂದ್ರಶೇಖರ್(20), ಶ್ಯಾಮ್ (18), ರಘು (20) ಮತ್ತು ಪೀಟರ್ (20) ಬಂಧಿತ ಆರೋಪಿಗಳು.
ಕತ್ರಿಗುಪ್ಪೆ ರಿಂಗ್ ರಸ್ತೆಯ ಕೆಇಬಿ ಪಾರ್ಕ್ ಬಳಿ ಅರವಿಂದ್ ಎಂಬುವರು ಕಾರನ್ನು ನಿಲ್ಲಿಸಿಕೊಂಡು ಹೀರೋಹೋಂಡಾ ಶೋ ರೂಂ ಮುಂದೆ ನಿಂತುಕೊಂಡು ಚಿಕ್ಕಮಗಳೂರಿನಿಂದ ಬರುತ್ತಿದ್ದ ಪತ್ನಿಗಾಗಿ ಕಾಯುತ್ತಿದ್ದರು.
ಈ ಸಂದರ್ಭದಲ್ಲಿ ಎರಡು ಹೋಂಡಾ ಆ್ಯಕ್ಟೀವಾ ವಾಹನದಲ್ಲಿ ಬಂದ 6 ಮಂದಿ ದರೋಡೆಕೋರರು ಅರವಿಂದ್ ಅವರಿಗೆ ಚಾಕು ತೋರಿಸಿ ಬೆದರಿಸಿ 10,000 ಬೆಲೆ ಬಾಳುವ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಸಂಬಂಧ ಅರವಿಂದ್ ಅವರು ಸಿ.ಕೆ.ಅಚ್ಚುಕಟ್ಟು ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೋಲೀಸರು ತಕ್ಷಣ ಕಾರ್ಯಾಚರಣೆ ಕೈಗೊಂಡು ಘಟನೆ ನಡೆದ 12 ಗಂಟೆಯೊಳಗೆ 5 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ 1.60 ಲಕ್ಷ ರೂ. ಬೆಲೆ ಬಾಳುವ 11 ಮೊಬೈಲ್ಗಳು, 1 ಬಜಾಜ್ ಪಲ್ಸರ್ ಮತ್ತು ಕೃತ್ಯಕ್ಕೆ ಬಳಸಿದ್ದ 2 ಹೋಂಡಾ ಆ್ಯಕ್ಟೀವಾ ದ್ವಿಚಕ್ರ ವಾಹನಗಳು ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಬಂಧನದಿಂದ ಸಿ.ಕೆ.ಅಚ್ಚುಕಟ್ಟು ಠಾಣೆಯ ಒಂದು ಡಕಾಯಿತಿ ಪ್ರಕರಣ ಬ್ಯಾಟರಾಯನಪುರ ಪೋಲೀಸ್ ಠಾಣೆಯ ಎರಡು ದರೋಡೆ ಪ್ರಕರಣ, ಹನುಮಂತ ನಗರ ಪೋಲೀಸ್ ಠಾಣೆಯ ಒಂದು ವಾಹನ ಕಳವು ಪ್ರಕರಣ ಪತ್ತೆಯಾದಂತಾಗಿದೆ.
ಈ ಆರೋಪಿಗಳು ರಾತ್ರಿ ವೇಳೆ ಒಂಟಿಯಾಗಿ ಓಡಾಡುವವರನ್ನು ಟಾರ್ಗೆಟ್ ಮಾಡಿಕೊಂಡು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಾ ಮಚ್ಚು ಮತ್ತು ಚಾಕುವಿನಿಂದ ಹೊಡೆದು ಮೊಬೈಲ್ ಮತ್ತು ಹಣವನ್ನು ದರೋಡೆ ಮಾಡುವಂತಹ ಪ್ರವೃತ್ತಿ ಉಳ್ಳವರಾಗಿದ್ದಾರೆ.
ಫೋಟೋ ಕ್ರೆಡಿಟ್: jamaicaobserver.com (ಪ್ರಾತಿನಿಧ್ಯಕ್ಕಾಗಿ)