ಬೆಂಗಳೂರು,ಡಿ.31-ಕುಡಿದು ತೂರಾಡುವವರು, ಬಾಟಲ್ಗಳನ್ನು ಎಲ್ಲೆಂದರಲ್ಲಿ ಬಿಸಾಕುವವರ ಮೇಲೆ ಕಣ್ಣಿಡಲಿಡುವ ಬಿಬಿಎಂಪಿ ಮಾರ್ಷಲ್ಗಳು ಅಂತಹವರನ್ನು ಪಾಲಿಕೆ ಸಮುದಾಯ ಭವನದಲ್ಲಿ ಕೂಡಿ ಹಾಕಲಿದ್ದಾರೆ ಎಚ್ಚರ!
ಬಿಬಿಎಂಪಿ 40ಕ್ಕೂ ಹೆಚ್ಚಿನ ಮಾರ್ಷಲ್ಗಳನ್ನು ನೇಮಕ ಮಾಡಿದೆ.ಹೊಸ ವರ್ಷಾಚರಣೆಯ ಮೋಜು ಮಸ್ತಿಯಲ್ಲಿ ಎಚ್ಚರ ತಪ್ಪಿದರೆ ನಿಮ್ಮನ್ನು ಬಿಬಿಎಂಪಿ ಮಾರ್ಷಲ್ಗಳು ಪೊಲೀಸರ ಸಹಕಾರದೊಂದಿಗೆ ಹಿಡಿದು ಮುಲಾಜಿಲ್ಲದೇ ಕೂಡಿ ಹಾಕುತ್ತಾರೆ.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ನಗರವನ್ನು ಸ್ವಚ್ಛವಾಗಿಡಲು ಬಿಬಿಎಂಪಿ ಮಿಡ್ನೈಟ್ ಕಾರ್ಯಾಚರಣೆಗೆ ಮುಂದಾಗಿದೆ.
ತಡ ರಾತ್ರಿ 3 ಗಂಟೆಯಿಂದ ಮುಂಜಾನೆ 6 ಗಂಟೆಯವರೆಗೆ ನಗರದ ಎಲ್ಲಾ ಕಸವನ್ನು ತೆರವುಗೊಳಿಸಿ ಹೊಸ ವರ್ಷಕ್ಕೆ ನಗರವನ್ನು ಅಣಿಗೊಳಿಸಲು ಮುಂದಾಗಿದೆ.
ನಗರದ ಎಂ.ಜಿ ರೋಡ್, ಬ್ರಿಗೇಡ್ ರೋಡ್, ಇಂದಿರಾನಗರ, ಮಾರತ್ ಹಳ್ಳಿ, ಜಯನಗರ ಸೇರಿದಂತೆ ಹಲವೆಡೆ ಇಂದು ಪರಿಶೀಲನೆ ನಡೆಸಿದ ಮೇಯರ್ ಗಂಗಾಭಿಕೆ ಮಲ್ಲಿಕಾರ್ಜುನ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹೊಸ ವರ್ಷಾಚರಣೆಗೆ ಬಿಬಿಎಂಪಿ ಪೊಲೀಸರ ಸಹಕಾರದೊಂದಿಗೆ ಎಲ್ಲಾ ತಯಾರಿ ಮಾಡಿಕೊಂಡಿದೆ. ಆಯಕಟ್ಟಿನ ಜಾಗಗಳಲ್ಲಿ 40 ಮಾರ್ಷಲ್ಗಳನ್ನು ನಿಯೋಜನೆ ಮಾಡಲಾಗುವುದು ಎಂದು ಹೇಳಿದರು.
ಕುಡಿದು ವಾಹನ ಚಾಲನೆ ಮಾಡುವುದು, ಯುವತಿಯರಿಗೆ, ಮಹಿಳೆಯರಿಗೆ ತೊಂದರೆ ಕೊಡುವವರ ಮೇಲೆ ಮಾರ್ಷಲ್ಗಳು ನಿಗಾವಹಿಸಲಿದ್ದಾರೆ.
ಇಂದು ರಾತ್ರಿ ಕಂಟ್ರೋಲ್ ರೂಂನಲ್ಲಿ ನಾಲ್ವರು ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, ಬೀದಿ ದೀಪ ಇನ್ನಿತರ ಸಮಸ್ಯೆಗಳಿದ್ದರೆ ಸಂಪರ್ಕಿಸಲು ಕೋರಲಾಗಿದೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ಕಸ ಬೀಳಲಿದೆ.ಪೌರ ಕಾರ್ಮಿಕರು ರಾತ್ರಿ 3 ಗಂಟೆಗೆ ಕಸ ತೆರವು ಮಾಡುವ ಕೆಲಸದಲ್ಲಿ ನಿರತರಾಗಲಿದ್ದಾರೆ. ಬೆಳಗ್ಗೆ 6 ಗಂಟೆಗೆ ನಗರದ ಎಲ್ಲಾ ಕಸವನ್ನು ತೆರವುಗೊಳಿಸಲಿದ್ದಾರೆ.