2022-23ರ ವೇಳೆಗೆ ಪೂರ್ಣಗೊಳ್ಳಲಿರುವ ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ, ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಡಿ.25-ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳನ್ನು 2022-23ರ ವೇಳೆಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ.
ಯೋಜನೆಯ ಮೊದಲನೆ ಹಂತದ ಲಿಫ್ಟ್ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, 2019ರಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಲು ಯೋಜಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಜೆಡಿಎಸ್ ಶಾಸಕ ಎಂ.ವಿ.ವೀರಭದ್ರಯ್ಯ ಹಾಗೂ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಹೆಸರಘಟ್ಟ ಕೆರೆಗೆ 0.80 ಟಿಎಂಸಿ ನೀರು ಹರಿಸಲು ಯೋಜಿಸಲಾಗಿದೆ. 2022-23 ಸಾಲಿನಲ್ಲಿ ಎತ್ತಿನ ಹೊಳೆ ಯೋಜನೆಯಡಿ ಹೆಸರಘಟ್ಟ ಕೆರೆಗೆ ನೀರು ಹರಿಸಲು ಉದ್ದೇಶಿಸಲಾಗಿದೆ ಎಂದಿದ್ದಾರೆ.

ಎತ್ತಿನ ಹೊಳೆ ಯೋಜನೆಯ ಮೊದಲ ಹಂತದ 5 ಪ್ಯಾಕೇಜ್‍ಗಳು ಕಳೆದ 2014ರಲ್ಲಿ ಪ್ರಾರಂಭಿಸಲಾಗಿತ್ತು. ಇದುವರೆಗೂ 3,627.74 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಯೋಜನೆಯಡಿ 8.967 ಟಿಎಂಸಿ ಅಡಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ 527 ಸಣ್ಣ ನೀರಾವರಿ ಕೆರೆಗಳಿಗೆ ಶೇ.50ರಷ್ಟು ನೀರು ತುಂಬಿಸಲು ಯೋಜಿಸಲಾಗಿದೆ.

ಮಧುಗಿರಿ ತಾಲೂಕಿನ ಪಟ್ಟಣ ಹಾಗೂ 302 ಗ್ರಾಮಗಳಿಗೆ ಈ ಯೋಜನೆಯಿಂದ ಉಪಯೋಗವಾಗಲಿದೆ. ಒಟ್ಟಾರೆ 1.27 ಟಿಎಂಸಿ ಅಡಿ ನೀರನ್ನು ಮಧುಗಿರಿ ತಾಲೂಕಿಗೆ ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ.

ರಾಮನಗರ ಮತ್ತು ಮಧುಗಿರಿ ಪೀಡರ್ ಕಾಲೋನಿಗಳ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಟೆಂಡರ್ ಕರೆಯಲು ಕ್ರಮಕೈಗೊಳ್ಳಲಾಗುತ್ತಿದೆ. ಗೌರಿಬಿದನೂರು, ಶ್ರೀನಿವಾಸಪುರ, ಕೋಲಾರ, ಚಿಕ್ಕಬಳ್ಳಾಪುರ ತಾಲೂಕುಗಳ ಪೀಡರ್ ಕಾಲುವೆಗಳ ಅಂದಾಜು ಪಟ್ಟಿ ತಯಾರಿಸಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ