ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೊಡದಿದ್ದರೆ ಸಾಮೂಹಿಕ ರಾಜಿನಾಮೆ, ಬಿಬಿಎಂಪಿ ಸದಸ್ಯರ ಬೆದರಿಕೆ

ಬೆಂಗಳೂರು, ಡಿ.25- ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಬಿಟಿಎಂ ಬಡಾವಣೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‍ನ ಬಿಬಿಎಂಪಿ ಸದಸ್ಯರು ಬೆದರಿಕೆ ಹಾಕಿದ್ದಾರೆ.

ಮಡಿವಾಳ ವಾರ್ಡ್‍ನ ಮಂಜುನಾಥ ರೆಡ್ಡಿ , ಗುರಪ್ಪನ ಪಾಳ್ಯ ವಾರ್ಡ್‍ನ ಮಹಮದ್ ರಿಜ್ವಾನ್, ಆಡುಗೋಡಿ ವಾರ್ಡ್‍ನ ಮಂಜುಳಾ ಸಂಪತ್‍ಕುಮಾರ್, ಈಜಿಪುರ ವಾರ್ಡ್‍ನ ರಾಮಚಂದ್ರ ಹಾಗೂ ಸುದ್ದು ಗುಂಟೆ ಪಾಳ್ಯ ವಾರ್ಡ್‍ನ ಜಿ.ಮಂಜುನಾಥ್ ರಾಜೀನಾಮೆ ನೀಡುವ ಬೆದರಿಕೆ ಹಾಕಿರುವ ಬಿಬಿಎಂಪಿ ಸದಸ್ಯರು.

ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಇತ್ತು. ಆದರೆ ಪುನಾರಚನೆ ಸಂದರ್ಭದಲ್ಲಿ ಬೆಂಗಳೂರಿನಿಂದ ಹೊಸಕೋಟೆ ಶಾಸಕ ಎಂ.ಟಿ.ಬಿ.ನಾಗರಾಜ್ ಅವರಿಗೆ ಮಾತ್ರ ಸ್ಥಾನ ನೀಡಲಾಗಿತ್ತು.

ಹಿರಿಯ ಕಾಂಗ್ರೆಸ್ ಮುಖಂಡರಾಗಿರುವ ರಾಮಲಿಂಗಾರೆಡ್ಡಿ ಅವರು ಬೆಂಗಳೂರಿನ ಮೇಲೆ ಹಿಡಿತ ಹೊಂದಿದ್ದಾರೆ. ಅಂತಹವರಿಗೆ ಸಚಿವ ಸ್ಥಾನ ನೀಡಿದರೆ ಪಕ್ಷಕ್ಕೆ ಒಳಿತಾಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ ರೆಡ್ಡಿ ಅವರಿಗೆ ಸಚಿವ ಸ್ಥಾನ ದೊರೆಯದಿರುವುದು ಅವರ ಅಭಿಮಾನಿಗಳು ಮತ್ತು ಬೆಂಬಲಿಗರಲ್ಲಿ ಅಸಮಾಧಾನ ಉಂಟಾಗಿದೆ.

ರೆಡ್ಡಿ ಅವರಿಗೆ ಸಚಿವ ಸ್ಥಾನ ದೊರೆಯದಿದ್ದರೆ ಮುಂದೆ ಏನು ಮಾಡಬೇಕು ಎಂಬ ನಿಟ್ಟಿನಲ್ಲಿ ಬಿಟಿಎಂ ಬಡಾವಣೆಯ ಎಲ್ಲಾ ಬಿಬಿಎಂಪಿ ಸದಸ್ಯರು ಹಾಗೂ ಬ್ಲಾಕ್ ಕಾಂಗ್ರೆಸ್ ಮುಖಂಡರು ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.

ಮಾತುಕತೆ ಸಂದರ್ಭದಲ್ಲಿ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಸಾಮೂಹಿಕ ರಾಜೀನಾಮೆ ನೀಡುವ ಬಗ್ಗೆ ಚರ್ಚೆ ನಡೆಸಲಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾಮಲಿಂಗಾರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ರೆಡ್ಡಿ ಅವರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಬಿಬಿಎಂಪಿ ಸದಸ್ಯರು ಒಕ್ಕೊರಲ ಮನವಿ ಮಾಡಿಕೊಂಡಿದ್ದಾರೆ.

ಒಂದು ವೇಳೆ ಸಿದ್ದರಾಮಯ್ಯ ಅವರ ಮಾತುಕತೆ ನಂತರವೂ ರೆಡ್ಡಿ ಅವರನ್ನು ಕಡೆಗಣಿಸಿದರೆ ಬಿಟಿಎಂ ಬಡಾವಣೆಯ ಕಾಂಗ್ರೆಸ್‍ನ ಎಲ್ಲಾ ಬಿಬಿಎಂಪಿ ಸದಸ್ಯರು , ಬ್ಲಾಕ್ ಕಾಂಗ್ರೆಸ್ ಮುಖಂಡರು ಹಾಗೂ ಅಕ್ಕ-ಪಕ್ಕದ ವಾರ್ಡ್‍ನ ಇತರ ಹಲವು ಕಾಂಗ್ರೆಸ್ ಸದಸ್ಯರು ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ ಎಂದು ಆಡುಗೋಡಿ ವಾರ್ಡ್‍ನ ಮಂಜುಳಾ ಸಂಪತ್‍ಕುಮಾರ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ