ಬೆಂಗಳೂರು,ಡಿ.23- 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನುಡಿ ಜಾತ್ರೆಗೆ ಸಾಧಕರ ನಾಡು ಧಾರವಾಡ ಸಜ್ಜಾಗುತ್ತಿದೆ.
ಜನವರಿ 4,5 ಮತ್ತು 6 ಈ ಮೂರು ದಿನಗಳ ಕಾಲ ಧಾರವಾಡದ ಕೃಷಿ ವಿಶ್ವ ವಿದ್ಯಾಲಯದ ಆವರಣದಲ್ಲಿ ನಾಡ ವೈಭವವನ್ನು ಮೆರೆಸಲಿರುವ ಸಾಹಿತ್ಯ ಸಮ್ಮೇಳನಕ್ಕೆ ಮಹಾಕವಿ ಪಂಪ ಮಹಾ ಮಂಟಪ, ಅಂಬಿಕಾತನಯ ದತ್ತ ಪ್ರದಾನ ವೇದಿಕೆ, ಡೆಪ್ಯುಟಿ ಚನ್ನಬಸಪ್ಪ ಮಹಾದ್ವಾರ, ಆಲೂರು ವೆಂಕಟರಾವ್, ಡಾ.ವಿ.ಕೃ.ಗೋಕಾಕ್, ಡಾ.ಎಂ.ಎಂ.ಕಲ್ಬುರ್ಗಿ, ಡಾ.ಕೃಷ್ಣಶರ್ಮ ಹೆಸರಿನ ಐದು ಮಹಾದ್ವಾರಗಳನ್ನು ನಿರ್ಮಿಸಲಾಗುತ್ತಿದೆ.
ಜ.4ರಂದು ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ರಾಷ್ಟ್ರಧ್ವಜಾರೋಹಣದ ಮೂಲಕ ನುಡಿ ಜಾತ್ರೆಗೆ ಚಾಲನೆ ನೀಡಲಿದ್ದಾರೆ. ಸಾಹಿತ್ಯ ಪರಿಷತ್ ಅಧ್ಯಕ್ಷ ಮನುಬಳಿಗಾರ್ ಪರಿಷತ್ತಿನ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಧಾರವಾಡದ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ನಾಡಧ್ವಜಾರೋಹಣ ಮಾಡಲಿದ್ದಾರೆ. ಬೆಳಗ್ಗೆ 8.30ಕ್ಕೆ ಸಮ್ಮೇಳನದ ಸರ್ವಾಧ್ಯಕ್ಷರಾದ, ಜ್ಞಾನ ಪೀಠ ಪ್ರಶಸ್ತಿ ಪುರಸ್ಕøತ ಡಾ.ಚಂದ್ರಶೇಖರ ಕಂಬಾರ ಅವರ ವೈಭವದ ಮೆರವಣಿಗೆ ನಡೆಯಲ್ಲಿದ್ದು ಜಿಲ್ಲಾಧಿಕಾರಿ ದೀಪಾ ಚೋಳನ್ ಚಾಲನೆ ನೀಡಲಿದ್ದಾರೆ.
ಪೆÇಲೀಸ್ ಆಯುಕ್ತ ಎಂ.ಎನ್.ನಾಗರಾಜ್, ಜಿ.ಪಂ ಸಿಇಓ ಬಿ.ಸತೀಶ್, ಎಸ್ಪಿ ಜಿ.ಸಂಗೀತಾ, ಮಹಾನಗರ ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್, ಮಾಜಿ ಸಭಾಪತಿ ಡಾ.ವೀರಣಮತ್ತಿಕಟ್ಟಿ, ಮುಖಂಡರಾದ ಡಾ.ಚಂದ್ರಕಾಂತ ಬೆಲ್ಲದ್, ವಿನಯ್ ಕುಲಕರ್ಣಿ, ಮೋಹನ್ ಲಿಂಬೀಕಾಯಿ, ಎಂ.ಎಚ್.ಕೋನರೆಡ್ಡಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮಾರಂಭ ಉದ್ಘಾಟಿಸಲಿದ್ದು, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಹಾಮಂಟಪ ಉದ್ಘಾಟಿಸಲಿದ್ದಾರೆ.
ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆಗೆ ಡಾ.ಜಯಮಾಲಾ ಚಾಲನೆ ನೀಡಲಿದ್ದಾರೆ.ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪುಸ್ತಕ ಮಳಿಗೆಗಳ ಉದ್ಘಾಟನೆ ನೆರವೇರಿಸಲಿದ್ದು, ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ ವಿವಿಧ ಲೇಖಕರ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ.
ಸಂಸದ ಪ್ರಹ್ಲಾದ ಜೋಷಿಯವರು ಪರಿಷತ್ತಿನ ಪುಸ್ತಕಗಳ ಬಿಡುಗಡೆ ಮಾಡಲಿದ್ದು, ಮಾಜಿ ಸಭಾಪತಿ ಬಸವರಾಜು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.ಸಚಿವರಾದ ಶಿವಳ್ಳಿ ಚಿತ್ರಕಲಾ ಪ್ರದರ್ಶನ ಉದ್ಘಾಟನೆ ಮಾಡಲಿದ್ದಾರೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾದ ಸುಧೀರ್ ಸರಾಫ್ ವಾಣಿಜ್ಯ ಮಳಿಗೆಗಳ ಉದ್ಘಾಟನೆ ನೆರವೇರಿಸಿದರೆ, ಜಿ.ಪಂ ಅಧ್ಯಕ್ಷೆ ಚೈತ್ರಾ ಶಿರೂರ ವೇದಿಕೆ ಉದ್ಘಾಟನೆ ಮಾಡಲಿದ್ದಾರೆ. ಶಾಸಕ ಅರವಿಂದ ಬೆಲ್ಲದ ಮುಖ್ಯ ದ್ವಾರ ಉದ್ಘಾಟನೆ ಮಾಡಲಿದ್ದು, ಶಾಸಕರಾದ ಅಬ್ಬಯ್ಯ ಪ್ರಸಾದ್, ಅಮೃತ ದೇಸಾಯಿ, ಶ್ರೀನಿವಾಸ ಮಾನೆ, ಶಂಕರ ಪಾಟೀಲ ಮುನೇನಕೊಪ್ಪ, ಸಿ.ಎಂ.ನಿಂಬಣ್ಣನವರ್, ಪ್ರದೀಪ್ ಶೆಟ್ಟರ್, ಎಸ್.ವಿ. ಸಂಕನೂರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಬಿ.ಬಸವರಾಜು, ಧಾರವಾಡ ಕೃಷಿ ವಿವಿ ಕುಲಪತಿ ಡಾ.ಎಂ.ಬಿ.ಚೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ.ರಾಜಶೇಖರ ಹತಗುಂದಿ, ವ.ಚ.ಚನ್ನೇಗೌಡ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ.
ಸಮ್ಮೇಳನದಲ್ಲಿ ಮೊದಲ ದಿನ ಉತ್ತರ ಕರ್ನಾಟಕ: ಅಭಿವೃದ್ಧಿಯ ಸವಾಲುಗಳು, ದಲಿತ ಅಸ್ಮಿತೆ ಕುರಿತು ವಿಚಾರ ಗೋಷ್ಠಿ ನಡೆಯಲಿದೆ.
ಎರಡನೇ ದಿನ ಕನ್ನಡ ಶಾಲೆಗಳ ಅಳಿವು-ಉಳಿವು, ವಿಶೇಷ ಉಪನ್ಯಾಸ, ಮಹಿಳಾ ಸಂವೇದನೆ, ಗಡಿನಾಡ ತಲ್ಲಣಗಳು, ನೀರಾವರಿ: ಜ್ವಲಂತ ಸಮಸ್ಯೆಗಳು, ಕನ್ನಡ ಚಲನಚಿತ್ರ ಮತ್ತು ಕಿರುತೆರೆ ವಿಚಾರಗಳ ಕುರಿತು ಗೋಷ್ಠಿಗಳು ನಡೆಯಲಿವೆ.
ರೈತರ ಜ್ಞಾನಾಭಿವೃದ್ಧಿ ಕೇಂದ್ರ ಸಭಾಂಗಣದ ಡಾ.ಶಂ.ಬಾ ಜೋಶಿ ವೇದಿಕೆಯಲ್ಲಿ ಸಮಾನಾಂತರ ಗೋಷ್ಠಿಗಳು ನಡೆಯಲಿವೆ.
ಜ.4ರಂದು ಕನ್ನಡ ಕಟ್ಟುವಿಕೆ: ಸಾಂಸ್ಥಿಕ ಸಾಧನೆಗಳು ಮತ್ತು ನಿರೀಕ್ಷೆಗಳು, ಮರು ಓದು: ಪ್ರಾಚೀನ ಹಾಗೂ ಮಧ್ಯಕಾಲೀನ ಸಾಹಿತ್ಯದ ಕುರಿತು ವಿಚಾರ ಮಂಡನೆಯಾಗಲಿದೆ.
ಜ.5ರಂದು ಮರು ಚಿಂತನೆ: ಆಧುನಿಕ ಸಾಹಿತ್ಯ, ವೈಚಾರಿಕತೆ ಮತ್ತು ಅಸಹಿಷ್ಣುತೆ, ವಿಶಿಷ್ಟ ಸಾಹಿತ್ಯ ಪ್ರಭೇದಗಳು ಕುರಿತು ಗೋಷ್ಠಿ ನಡೆಯಲಿದೆ.
ಜ.6ರಂದು ಕರ್ನಾಟಕ ಮೌಖಿಕ ಪರಂಪರೆ, ಕೃಷಿ ಕ್ಷೇತ್ರ: ಸವಾಲುಗಳು, ಸಂಕೀರ್ಣದ ಕುರಿತು ವಿಚಾರ ಮಂಡನೆಯಾಗಲಿದೆ.
ಕೊನೆಯ ದಿನ ಕಸಾಪ ಅಧ್ಯಕ್ಷ ಡಾ.ಮನುಬಳಿಗಾರ ಅಧ್ಯಕ್ಷತೆಯಲ್ಲಿ ಬಹಿರಂಗ ಅಧಿವೇಶನ ನಡೆಯಲಿದ್ದು, ಕಸಾಪ ಗೌ.ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ನಿರ್ಣಯ ಮಂಡನೆ ಮಾಡಲಿದ್ದಾರೆ. ತದ ನಂತರದ ಸಮಾರೋಪ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಡಾ.ಹಂಪ ನಾಗರಾಜಯ್ಯ ಸಮಾರೋಪ ಭಾಷಣ ಮಾಡಲಿದ್ದು, ಡಾ.ಚನ್ನವೀರ ಕಣವಿಯವರ ಗೌರವ ಉಪಸ್ಥಿತಿ ಇರಲಿದೆ.