ಅಯೋಧ್ಯಾ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕುರಿತು ಹೋರಾಟ ಮುಂದುವರಿದಿರುವ ನಡುವೆಯೇ ರಾಮಕಥೆ ವಿಚಾರಕ್ಕೆ ಸಂಬಂಧಿಸಿದಂತೆ ತುಳಸೀದಾಸರ ‘ಮಾನಸ್ ಗಣಿಕಾ’ ಪಠಣಕ್ಕೆ ಆಧ್ಯಾತ್ಮಿಕ ಗುರು ಮೊರಾರಿ ಬಾಪು ಲೈಂಗಿಕ ಕಾರ್ಯಕರ್ತರಿಗೆ ಆಹ್ವಾನ ನೀಡಿದ್ದು ಹಾಗೂ ಕಾರ್ಯಕ್ರಮದಲ್ಲಿ 200 ಲೈಂಗಿಕ ಕಾರ್ಯಕರ್ತೆಯರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಈಗ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಕಿಡಿಕಾರಿರುವ ದಾಂಡಿಯಾ ದೇವಾಲಯದ ಮಹಂತ ಭರತ್ ವ್ಯಾಸ್, ಶ್ರೀರಾಮಚಂದ್ರನ ಜನ್ಮಭೂಮಿಯಲ್ಲಿ ಲೈಂಗಿಕ ಕಾರ್ಯಕರ್ತೆಯರು ಸೇರಿರುವುದು ತಪ್ಪು ಸಂದೇಶವನ್ನು ನೀಡುತ್ತದೆ. ಇದು ಭಕ್ತರು ತಮ್ಮ ಪಾಪವನ್ನು ತೊಳೆದುಕೊಳ್ಳಲು ಬರುವ ಸ್ಥಳ. ಹೀಗಾಗಿ, ಮೊರಾರಿ ಬಾಪುವಿನ ನಡೆಯನ್ನು ನಾವು ವಿರೋಧಿಸುತ್ತೇವೆ ಎಂದಿದ್ದಾರೆ.
ಈ ನಡುವೆ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಲೈಂಗಿಕ ಕಾರ್ಯಕರ್ತೆಯರು ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ಮೊದಲ ಬಾರಿ ನಾವು ಧಾರ್ಮಿಕ ಸಭೆಯೊಂದರ ಭಾಗಿಯಾಗಿದ್ದೆವು. ನಮ್ಮನ್ನು ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದು ಅತಿ ದೊಡ್ಡ ಗೌರವ ಎಂದು ಮಹಿಳೆಯೊಬ್ಬರು ತಿಳಿಸಿದ್ದಾರೆ.
ಇದೇ ವೇಳೆ ತಮ್ಮ ನಡೆಯನ್ನು ಮೊರಾರಿ ಬಾಪು ಸಮರ್ಥಿಸಿಕೊಂಡಿದ್ದು, ತುಳಸೀದಾಸ್ ರಾಮಾಯಣದಲ್ಲಿ ‘ಗಣಿಕಾರ’ರ ( ಲೈಂಗಿಕ ಕಾರ್ಯಕರ್ತೆ)ನ್ನು ಉಲ್ಲೇಖಿಸಿದ್ದು, ಅವರ ಜೀವನ ಸುಧಾರಣೆ ಮಾಡುವ ಬಗ್ಗೆ ಮಾತನಾಡಿದ್ದರು. ಹೀಗಾಗಿ, ಸರಿಯಾದ ಸವಲತ್ತು ಹೊಂದಿಲ್ಲದವರ ಬಗೆಗಿನ ವಿಚಾರಗಳನ್ನು ನಾನು ಕೈಗೆತ್ತಿಕೊಳ್ಳುವುದನ್ನು ಮುಂದುವರಿಸಲಿದ್ದೇನೆ. ಯಾಕೆಂದರೆ, ಶ್ರೀ ರಾಮನ ಜೀವನವು ಸಹ ಒಪ್ಪಿಗೆ ಹಾಗೂ ಸುಧಾರಣೆ ಮೇಲೆ ಆಧಾರಿತವಾಗಿದೆ ಎಂದು ತಿಳಿಸಿದ್ದಾರೆ.
ಮುಂಬಯಿಯ ಕಾಮಥಿಪುರಕ್ಕೆ ಡಿಸೆಂಬರ್ ತಿಂಗಳ ಆರಂಭದಲ್ಲಿ ಭೇಟಿ ನೀಡಿದ್ದ ಮೊರಾರಿ ಬಾಪು ಲೈಂಗಿಕ ಕಾರ್ಯಕರ್ತೆಯರ ಜತೆ ಚರ್ಚೆ ನಡೆಸಿದ್ದರು. ಈ ವೇಳೆ, ಅವರಿಗೆ ಅಯೋಧ್ಯೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಹ್ವಾನ ನೀಡಿದ್ದರು.
ಆದರೆ, ಜ್ಯೋತಿಷ್ ಶೋಧ ಸಂಸ್ಥಾನ ಎಂಬ ಬಲಪಂಥೀಯ ಸಂಘಟನೆಯ ಮುಖ್ಯಸ್ಥ ಪ್ರವೀಣ್ ಶರ್ಮಾ ಮೊರಾರಿ ಬಾಪು ವಿರುದ್ಧ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ ದೂರು ನೀಡಿದ್ದಾರೆ. ಅಲ್ಲದೆ, ”ಲೈಂಗಿಕ ಕಾರ್ಯಕರ್ತೆಯರ ಜೀವನ ಸುಧಾರಿಸಲು ಅವರು ಬಯಸಿದ್ದರೆ ರಾಮಕಥಾಗೆ ಹಣ ಖರ್ಚು ಮಾಡುವ ಬದಲು ಅವರಿಗೆ ಹಣ ಹಂಚಲಿ ಎಂದಿದ್ದಾರೆ.
ಇನ್ನು ಧರಮ್ ಸೇನಾ ಮುಖ್ಯಸ್ಥ ಹಾಗೂ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಯಾಗಿರುವ ಸಂತೋಷ್ ದುಬೇ ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಬಾಪು ಈ ನಗರಕ್ಕಿರುವ ಪವಿತ್ರ ನಂಟನ್ನು ಹಾಳು ಮಾಡಲು ಯತ್ನಿಸುತ್ತಿದ್ದಾರೆ. ಅವರು ಜೀವನ ಸುಧಾರಿಸಬೇಕಾದರೆ, ರೆಡ್ ಲೈಟ್ ಪ್ರದೇಶಕ್ಕೆ ಹೋಗಿ ಅಥವಾ ಮಾವೋವಾದಿ ಪ್ರದೇಶಗಳಲ್ಲಿ ರಾಮ ಕಥೆಗಳನ್ನು ಆಯೋಜಿಸಲಿ ಎಂದು ಗುಡುಗಿದ್ದಾರೆ. ಒಟ್ಟಾರೆ ಮೊರಾರಿ ಬಾಪು ಅವರ ನಡೆ ಈಗ ದೇಶಾದ್ಯಂತ ಹೊಸ ಚರ್ಚೆ, ವಿವಾದಗಳನ್ನು ಆರಂಭಿಸಿದೆ.
Morari Bapu, Invites Mumbai Sex Workers, to Ram Katha, in Ayodhya