ಇಂಡೋನೇಷ್ಯಾಕ್ಕೆ ಅಪ್ಪಳಿಸಿದ ಸುನಾಮಿ; 168 ಜನರ ಬಲಿ, 700ಕ್ಕೂ ಹೆಚ್ಚು ಜನರಿಗೆ ಗಾಯ

ಜಕಾರ್ತಾ: ಇಂಡೋನೇಷ್ಯಾದಲ್ಲಿ ಸುನಾಮಿ ಬಂದಪ್ಪಳಿಸಿದ್ದು, 168 ಜನರನ್ನು ಬಲಿ ತೆಗೆದುಕೊಂಡಿದೆ. 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅನೇಕರು ಕಾಣೆಯಾಗಿದ್ದಾರೆ.

ಸುಂಡಾ ಸ್ಟ್ರೈಟ್​ ಪ್ರದೇಶದಲ್ಲಿ ಭಾರೀ ಗಾತ್ರದ ಅಲೆಗಳು ದಡಕ್ಕೆ ಬಂದಪ್ಪಳಿಸುತ್ತಿವೆ. ಅನೇಕ ಮನೆಗಳು ನೆಲಕ್ಕುರುಳಿವೆ. ಸಮುದ್ರ ತೀರದಲ್ಲಿರುವ ಹೋಟೆಲ್​ಗಳು ನೆಲಕಚ್ಚಿವೆ. ಈಗಾಗಲೇ ಅನೇಕರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಅನಕ್​ ಕ್ರಾಕತು ಪ್ರದೇಶದಲ್ಲಿ ಜ್ವಾಲಾಮುಖಿ ಕಾಣಿಸಿಕೊಂಡಿದೆ. ಹಾಗಾಗಿ ಸಮುದ್ರದಾಳದಲ್ಲಿ ಭೂಕುಸಿತ ಸಂಭವಿಸಿತ್ತು. ಇದರಿಂದಾಗಿ 20 ಮೀಟರ್ ಎತ್ತರದ ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ​ ಎಂದು ಇಂಡೋನೇಷ್ಯಾ ಹವಾಮಾನ ಇಲಾಖೆ ತಿಳಿಸಿದೆ.

“ನಾನು ನೋಡ ನೋಡುತ್ತಿದ್ದಂತೆ ಬೃಹತ್​ ಗಾತೃದ ಅಲೆಗಳು ದಡಕ್ಕೆ ಬರಲು ಆರಂಭಿಸಿದವು. ಮನೆಗಳೆಲ್ಲ ನೆಲಕ್ಕೆ ಉರುಳಿದ್ದವು. ಈ ಘಟನೆಯಲ್ಲಿ ನಾನು ಪ್ರಾಣ ಉಳಿಸಿಕೊಂಡಿದ್ದೇ ಹೆಚ್ಚು” ಎಂದು ಪ್ರತ್ಯಕ್ಷ ದರ್ಶಿಯೋರ್ವ ಹೇಳಿದ್ದಾನೆ.

“ನಾನು ಹೋಟೆಲ್​ನಲ್ಲಿ ಕುಳಿತಿದ್ದೆ. ಈ ವೇಳೆ ಸಮುದ್ರದ ಅಲೆಗಳು ಬಂದಪ್ಪಳಿಸಿದಂತೆ ಭಾಸವಾಯಿತು. ಸಮುದ್ರದೆಡೆಗೆ ನೋಡಿದರೆ ಬೃಹತ್​ ಗಾತೃದ ಅಲೆಗಳು ಏಳುತ್ತಿದ್ದವು. ನಾನು ಕುಟುಂಬ ಸಮೇತ ಹೊಟೆಲ್​ನಿಂದ ಹೊರ ಬಂದೆ. ನಂತರ ಹೇಗೋ ಪ್ರಾಣ ಉಳಿಸಿಕೊಂಡೆ” ಎಂದು ಜೀವ ಉಳಿಸಿಕೊಂಡ ಪ್ರವಾಸಿಗರೊಬ್ಬರು ಅಲ್ಲಿಯ ಪರಿಸ್ಥಿತಿ ವಿವರಿಸಿದ್ದಾರೆ.

ಸುಮಾರು 430 ಮನೆಗಳು ಹಾನಿಗೊಳಗಾಗಿವೆ ಎನ್ನಲಾಗಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್​ನಲ್ಲಿ ಇಂಡೋನೇಷ್ಯಾಕ್ಕೆ ಸುನಾಮಿ ಅಪ್ಪಳಿಸಿತ್ತು. ಈ ವೇಳೆ 2500ಕ್ಕೂ ಅಧಿಕ ಜನರು ಮೃತಪಟ್ಟಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ