ಸಚಿವರಾದ ಯು.ಟಿ.ಖಾದರ್, ರಮಾನಾಥ್‍ರೈ ಯಾವ ಟೆರೆರಿಸ್ಟ್‍ಗಳಿಗೂ ಕಡಿಮೆ ಇಲ್ಲ: ಬಿಜೆಪಿ ಪ್ರಧಾನಕಾರ್ಯದರ್ಶಿ ರವಿಕುಮಾರ್ ವಾಗ್ದಾಳಿ

ಬೆಂಗಳೂರು, ಮಾ.10-ರಾಜ್ಯ ಸಚಿವರ ವಿರುದ್ಧ ಬಿಜೆಪಿ ಪ್ರಧಾನಕಾರ್ಯದರ್ಶಿ ರವಿಕುಮಾರ್ ಅವರು ಇಂದಿಲ್ಲಿ ತೀವ್ರ ವಾಗ್ದಾಳಿ ನಡೆಸಿದರು.
ಬಿಜೆಪಿ ಕಾನೂನು ಮತ್ತು ಸಂಸದೀಯ ಪ್ರಕೋಷ್ಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಚಿವರಾದ ಯು.ಟಿ.ಖಾದರ್, ರಮಾನಾಥ್‍ರೈ ಅವರು ಯಾವ ಟೆರೆರಿಸ್ಟ್‍ಗಳಿಗೂ ಕಡಿಮೆ ಇಲ್ಲ. ಇವರನ್ನು ನೋಡಿದರೆ ಕರಾವಳಿ ಕರ್ನಾಟಕ ಹೇಗಿದೆ ಎಂಬುದು ಗೊತ್ತಾಗುತ್ತದೆ. ಇವರಿಬ್ಬರೂ ಟೆರೆರಿಸ್ಟ್‍ಗಳಿದ್ದಂತೆಯೇ ಎಂದು ದೂರಿದರು.
ಕರ್ನಾಟಕ ಹೇಗಿದೆ ಎಂದರೆ ಸಚಿವ ಕೆ.ಜೆ.ಜಾರ್ಜ್ ಅವರನ್ನು ನೋಡಿದರೆ ಗೊತ್ತಾಗುತ್ತದೆ. ಅವರು ಡಿವೈಎಸ್ಪಿಯನ್ನೇ ಹತ್ಯೆ ಮಾಡಿದವರು ಎಂದು ಗಂಭೀರ ಆರೋಪ ಮಾಡಿದರು.
ಉತ್ತರ ಕರ್ನಾಟಕ ಹೇಗಿದೆ ಎಂದರೆ, ಸಚಿವ ವಿನಯ್‍ಕುಲಕರ್ಣಿ ಅವರನ್ನು ನೋಡಿದರೆ ಗೊತ್ತಾಗುತ್ತದೆ. ಅವರು ಹೇಗೆ ಗೂಂಡಾಗಿರಿ ಮಾಡುತ್ತಾರೋ, ಆವಾಜ್ ಹಾಕುತ್ತಾರೋ ಅದರಲ್ಲೇ ಉತ್ತರ ಕರ್ನಾಟಕದ ಸ್ಥಿತಿ ಗೊತ್ತಾಗುತ್ತದೆ ಎಂದು ಹೇಳಿದರು.
ರಾಜ್ಯ ಉಸ್ತುವಾರಿ ಮುರಳೀಧರ್‍ರಾವ್ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಲೋಕಾಯುಕ್ತರ ಮೇಲೆಯೇ ಮಾರಣಾಂತಿಕ ಹಲ್ಲೆಯಾಗಿದೆ ಎಂದರೆ ಸಿದ್ದರಾಮಯ್ಯ ಒಬ್ಬ ಅಸಹಾಯಕ ಸಿಎಂ. ಅವರು ಆಸ್ಪತ್ರೆಗೆ ಹೋಗಿ ಸಾಂತ್ವನ ಹೇಳುವುದಕಷ್ಟೇ ಸೀಮಿತರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಇನ್ನು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಯಾವುದೇ ಪ್ರಕರಣ ನಡೆದರೂ ಸಿದ್ಧಪಡಿಸಿದ ಹೇಳಿಕೆಯನ್ನು ಪುನರುಚ್ಚರಿಸುತ್ತಾರೆ. ಪ್ರತಿದಿನ ಒಂದಲ್ಲ ಒಂದು ಪ್ರಕರಣಗಳು ಘಟಿಸುತ್ತಲೇ ಇವೆ ಎಂದು ಟೀಕಾಪ್ರಹಾರ ನಡೆಸಿದರು.
ಬಿಜೆಪಿ ಅಧಿಕಾರಕ್ಕೆ ಬರಲು ಸ್ವತಃ ಸಿದ್ದರಾಮಯ್ಯ ಅವರೇ ಸಹಾಯ ಮಾಡುತ್ತಿದ್ದಾರೆ. ನಮ್ಮ ಕೆಲಸ ಬಹಳ ಮುಖ್ಯವಾಗಿವೆ. ಇಲ್ಲಿ ನಡೆಯುವ ಎಲ್ಲ ಪ್ರಕರಣಗಳನ್ನು ಜನ ಮರೆತುಹೋಗದಂತೆ ನೋಡಿಕೊಳ್ಳಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಮಾಜಿ ಡಿಸಿಎಂ ಆರ್.ಅಶೋಕ್ ಮಾತನಾಡಿ, ಸಿದ್ದರಾಮಯ್ಯ ಬೆಂಗಳೂರಿನವರಲ್ಲ. ಇಲ್ಲಿ ಸೋತರೆ ಸಿದ್ದರಾಮನಹುಂಡಿಗೆ ಹೋಗುತ್ತಾರೆ. ಇವರಿಗೆ ಬೆಂಗಳೂರು ಬೇಕಿರುವುದು ಕೇವಲ ಎಟಿಎಂಗಾಗಿ. ವೈಟ್‍ಟಾಪಿಂಗ್ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು.
ನಗರದಲ್ಲಿ ಸರಗಳ್ಳರು ಹೆಚ್ಚಾಗಿದ್ದಾರೆ. ಇದುವರೆಗೆ ಸಾಮಾನ್ಯ ಜನರ ಸರಗಳ್ಳತನ ನಡೆಯುತ್ತಿತ್ತು. ಈಗ ಕಳ್ಳರಿಗೂ ಬೇಜಾರಾಗಿ ಬಿಟ್ಟಿದೆ. ಅದಕ್ಕಾಗಿ ಪೆÇಲೀಸ್ ಅಧಿಕಾರಿಗಳ ಪತ್ನಿಯ ಸರ ಕಿತ್ತುಕೊಂಡು ಹೋಗುತ್ತಿದ್ದಾರೆ ಎಂದು ದೂರಿದರು.
ಕಾನೂನು ಮತ್ತು ಸಂಸದೀಯ ಪ್ರಕೋಷ್ಟ ಉದ್ಘಾಟನಾ ಕಾರ್ಯಕ್ರಮ ಬರೋಬ್ಬರಿ ಎರಡೂವರೆ ಗಂಟೆ ತಡವಾಗಿ ಪ್ರಾರಂಭವಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ