ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿ ಸೈಕೋ ಜೈಶಂಕರ್ ಆತ್ಮಹತ್ಯೆ ಪ್ರಕರಣ: ಸಮಗ್ರ ವರದಿ ನೀಡುವಂತೆ ನೋಟೀಸ್

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿ ಸೈಕೋ ಜೈಶಂಕರ್ ಆತ್ಮಹತ್ಯೆ ಪ್ರಕರಣ: ಸಮಗ್ರ ವರದಿ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ನೋಟೀಸ್ ಜಾರಿ

ಬೆಂಗಳೂರು: ಮಾ-10: ಇತ್ತೀಚೆಗೆ ಬೆಂಗಳೂರಿನ ಕೇಂದ್ರಕಾರಾಗ್ರಹ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೈಕೋ ಕಿಲ್ಲರ್ ಜೈಶಂಕರ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ ಎಚ್ ಆರ್ ಸಿ) ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಜೈಶಂಕರ್ ಆತ್ಮಹತ್ಯೆಗೆ ಜೈಲು ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂಬ ವರದಿಗಳು ಪ್ರಸಾರವಾದ ಹಿನ್ನಲೆಯಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ಎನ್ ಎಚ್ ಆರ್ ಸಿ, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕರ್ನಾಟಕ ಬಂಧಿಖಾನೆ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ.

ಅತ್ಯಾಚಾರ ಹಾಗೂ ಕೊಲೆಗಳ ಮೂಲಕ ತಮಿಳುನಾಡು ಮತ್ತು ಕರ್ನಾಟಕದ ಜನರನ್ನು ಬೆಚ್ಚಿ ಬೀಳಿಸಿದ್ದ ವಿಕೃತಕಾಮಿ ಸೈಕೋ ಜೈಶಂಕರ್‌ ಅಲಿಯಾಸ್‌ ಜೈ ಶಂಕರ್‌ (38) ಕಳೆದ ತಿಂಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಬ್ಲೇಡ್‌ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಮಾಡಿಕೊಂಡಿದ್ದ. ಪ್ರಕರಣದ ಬಗ್ಗೆ 24 ಗಂಟೆಯೊಳಗೆ ವರದಿ ನೀಡದ್ದಕ್ಕೆ ಹಾಗೂ ಘಟನೆಗೆ ಸಂಬಂಧಿಸಿದಂತೆ ಆರು ವಾರದೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಪೊಲೀಸ್ ಮಹಾ ನಿರ್ದೇಶಕ(ಬಂಧಿಖಾನೆ)ರಿಗೂ ನೋಟಿಸ್ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ