ಬೆಳಗಾವಿ (ಸುವರ್ಣಸೌಧ), ಡಿ.19- ಮಹಾತ್ಮಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 10 ಕೋಟಿ ಮಾನವ ದಿನಗಳನ್ನು ಸೃಜನೆ ಮಾಡುವ ಗುರಿ ಹೊಂದಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ವಿಧಾನಸಭೆಗೆ ತಿಳಿಸಿದರು.
ರಾಜ್ಯದಲ್ಲಿ ನೂರಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರಗಾಲದಿಂದ ರೈತರು ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತಿತರ ಶಾಸಕರು ನಡೆಸಿದ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರ ನೀಡಿದ ಸಚಿವರು, ಸುಮಾರು 4400 ಕೋಟಿ ರೂ. ವೆಚ್ಚದಲ್ಲಿ ಮಾನವ ದಿನಗಳನ್ನು ಸೃಷ್ಟಿ ಮಾಡಿ ಜನರು ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಇದುವರೆಗೆ 9.16ಕೋಟಿ ಮಾನವ ದಿನಗಳನ್ನು ಸೃಷ್ಟಿ ಮಾಡಲಾಗಿದೆ. ಪ್ರಸಕ್ತ ವರ್ಷ ಎಂಟೂವರೆ ಕೋಟಿ ಮಾನವ ದಿನಗಳನ್ನು 3700 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿತ್ತು.ಬರ ಪರಿಸ್ಥಿತಿ ಇರುವುದರಿಂದ ಮಾನವ ದಿನಗಳನ್ನು ಹೆಚ್ಚಿಸಲಾಗುತ್ತಿದೆ.ಈಗಾಗಲೇ ಶೇ.75ರಷ್ಟು ಅಂದರೆ 6.15ಕೋಟಿ ಮಾನವ ದಿನಗಳನ್ನು ನರೇಗಾ ಯೋಜನೆಯಡಿ ಸೃಷ್ಟಿಸಲಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ 2700ಕೋಟಿ ರೂ.ಖರ್ಚಾಗಿದ್ದು, ಸುಮಾರು 500 ಕೋಟಿ ರೂ.ಸಾಮಗ್ರಿ ಬಳಕೆಯ ಬಾಕಿ ಪಾವತಿಸಬೇಕಿದೆ.ಕೂಲಿಕಾರರಿಗೆ 40 ಕೋಟಿ ರೂ.ಪಾವತಿಸಬೇಕಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಈಗಾಗಲೇ ಬಾಕಿ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.ತಾವು ಕೂಡ ಸಂಸದರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.
ಕೇಂದ್ರಕ್ಕೆ ನಿಯೋಗ:
ಕೇಂದ್ರ ಸರ್ಕಾರ ಬಿಡುಗಡೆ ಮಾಡದೆ ಬಾಕಿ ಉಳಿದಿರುವ ಅನುದಾನ ಬಿಡುಗಡೆ ಮಾಡುವಂತೆ ಸದ್ಯದಲ್ಲೇ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರ ಬಳಿ ನಿಯೋಗ ಕೊಂಡೊಯ್ಯಲಾಗುವುದು.ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 935 ಕೋಟಿ ರೂ. ಹಳೆ ಬಾಕಿ ಕೇಂದ್ರದಿಂದ ಬಿಡುಗಡೆಯಾಗಬೇಕಾಗಿದೆ. ಈಗಾಗಲೇ ಹಣವನ್ನು ರಾಜ್ಯ ಸರ್ಕಾರ ಪಾವತಿಸಿದ್ದು, ರಾಜ್ಯ ಸರ್ಕಾರಕ್ಕೆ ಕೇಂದ್ರ ಹಣ ನೀಡಬೇಕಾಗಿದೆ ಎಂದರು.
ಈ ವರ್ಷ ಬಾಕಿ ಉಳಿದಿರುವ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲು ವಿಳಂಬ ಮಾಡಿದರೆ ರಾಜ್ಯ ಸರ್ಕಾರದಿಂದಲೇ ಪಾವತಿ ಮಾಡಲು ಚಿಂತಿಸಲಾಗುತ್ತಿದೆ.ಆದರೆ, ರಾಜ್ಯ ಸರ್ಕಾರ ಪಾವತಿ ಮಾಡುವ ಹಣವನ್ನು ಕೇಂದ್ರ ಸರ್ಕಾರದಿಂದ ದೊರೆಯಬೇಕು ಎಂದು ಹೇಳಿದರು.
ನರೇಗಾ ಯೋಜನೆಯಡಿ ಕೆರೆಗಳ ಹೂಳೆತ್ತುವ, ಚೆಕ್‍ಡ್ಯಾಮ್ ನಿರ್ಮಾಣ, ಕಾಲುವೆ ನಿರ್ಮಾಣ, ಕಾಂಕ್ರಿಟ್ ರಸ್ತೆ ನಿರ್ಮಾಣ, ಕೃಷಿ ಹೊಂಡ, ದನದ ಕೊಟ್ಟಿಗೆ, ರೇಷ್ಮೆ ತೋಟಗಾರಿಕೆಗೂ ಬಳಸಬಹುದಾಗಿದೆ.ಸಮುದಾಯ ಆಧಾರಿತ ಕಾಮಗಾರಿಗಳಿಗೆ ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.