ಬೆಳಗಾವಿ, ಡಿ.18-ಈ ತಿಂಗಳ 22 ರಂದು ಸಚಿವ ಸಂಪುಟ ವಿಸ್ತರಣೆ ಮಾಡುವುದು ಖಚಿತ ಎಂದು ಶಾಸಕಾಂಗ ಪಕ್ಷದ ನಾಯಕ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿಂದು ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಸಂಪುಟ ವಿಸ್ತರಣೆ ಶತಃಸಿದ್ಧ. ಇದರಲ್ಲಿ ಯಾರಿಗೂ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.
ಶಾಸಕಾಂಗ ಸಭೆಯಲ್ಲಿ ಬಹುತೇಕ ರಾಜಕೀಯ ತಾರತಮ್ಯದ ಬಗ್ಗೆ ಚರ್ಚೆ ನಡೆದಿದೆ. ಕಾಂಗ್ರೆಸ್ನ ವಿಧಾನಪರಿಷತ್ ಸದಸ್ಯರಾದ ಕೆ.ಸಿ.ಕೊಂಡಯ್ಯ ಸೇರಿದಂತೆ ಬಹುತೇಕರು ತಮ್ಮ ಪಕ್ಷದ ನಾಯಕರ ಧೋರಣೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪದೇ ಪದೇ ಸಂಪುಟ ವಿಸ್ತರಣೆ ಮುಂದೂಡುತ್ತಿರುವ ಬಗ್ಗೆ ಶಾಸಕರು ನೇರವಾಗಿ ಅಸಮಾಧಾನ ಹೊರ ಹಾಕಿದ್ದು, ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಬೇಡಿ. ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಯಾವುದು ಸಾಧ್ಯವೋ ಅದನ್ನು ಆದಷ್ಟು ಶೀಘ್ರ ಮಾಡಿ ಎಂದು ಒತ್ತಡ ಹಾಕಿದ್ದಾರೆ.
ಉತ್ತರ ಕರ್ನಾಟಕ 40 ಮಂದಿ, ದಕ್ಷಿಣ ಕರ್ನಾಟಕದಲ್ಲಿ 40 ಮಂದಿ ಶಾಸಕರು ಗೆದ್ದಿದ್ದಾರೆ. ದಕ್ಷಿಣ ಕರ್ನಾಟಕದವರು 11 ಮಂದಿ ಸಚಿವರಾಗಿದ್ದಾರೆ. ಉತ್ತರ ಕರ್ನಾಟಕ ಭಾಗದ 5 ಮಂದಿ ಮಾತ್ರ ಸಚಿವರಾಗಿದ್ದಾರೆ. ಈ ರಾಜಕೀಯ ತಾರತಮ್ಯವನ್ನು ಜನ ಪ್ರಶ್ನೆ ಮಾಡುತ್ತಿದ್ದಾರೆ.
ಬಿಜೆಪಿ ನಾಯಕರು ಹಾದಿಬೀದಿಯಲ್ಲಿ ಇದರ ಬಗ್ಗೆಯೂ ಪ್ರಚಾರ ಮಾಡಿ ಉತ್ತರ ಭಾಗಕ್ಕಾಗಿರುವ ಅನ್ಯಾಯವನ್ನು ಜನರಿಗೆ ಮನದಟ್ಟು ಮಾಡಿಕೊಡುತ್ತಿದ್ದಾರೆ. ತಾರತಮ್ಯ ಸರಿಪಡಿಸದಿದ್ದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ತೊಂದರೆಯಾಗುವುದು ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ.
ಸಂಪುಟ ವಿಸ್ತರಣೆ ವೇಳೆ ಖಾಲಿ ಇರುವ ಆರಕ್ಕೆ 6 ಸ್ಥಾನವನ್ನು ಕಾಂಗ್ರೆಸ್ನಾಯಕರು ಉತ್ತರ ಕರ್ನಾಟಕಕ್ಕೇ ನೀಡಬೇಕು. ಆಗ ಮಾತ್ರ ಉತ್ತರ ಕರ್ನಾಟಕಕ್ಕೆ ಆಗಿರುವ ತಾರತಮ್ಯ ಸರಿಪಡಿಸಲು ಸಾಧ್ಯ.
ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ನಿಂದ 3 ಮಂದಿ ಮಾತ್ರ ಗೆದ್ದಿದ್ದಾರೆ. ಅದರಲ್ಲಿ ಒಬ್ಬರನ್ನು ಸಚಿವರನ್ನಾಗಿ ಮಾಡಲಾಗಿದೆ. ಇನ್ನೊಬ್ಬರು ಉಪಮುಖ್ಯಮಂತ್ರಿಯಾಗಿದ್ದಾರೆ.
ಬಳ್ಳಾರಿಯಲ್ಲಿ 6 ಮಂದಿ ಶಾಸಕರಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗಿಂತಲೂ ಹೆಚ್ಚು ಶಾಸಕರನ್ನು ಗೆಲ್ಲಿಸಿಕೊಂಡಿರುವುದು ಬಳ್ಳಾರಿ ಜಿಲ್ಲೆ. ಆದರೆ ನಮ್ಮಲ್ಲಿ ಒಬ್ಬರೂ ಸಚಿವರಿಲ್ಲ. ಬೇರೆ ಜಿಲ್ಲೆಯಿಂದ ಬಂದು ನಮ್ಮಲ್ಲೇ ಆಡಳಿತ ಮಾಡುತ್ತಿದ್ದಾರೆ. ಜನಸಾಮಾನ್ಯರಿಗೆ ಇದು ಅರ್ಥವಾಗುವುದಿಲ್ಲವೇ? ಸ್ಥಳೀಯವಾಗಿ ನಾವು ಜನರಿಗೆ ಏನು ಉತ್ತರ ನೀಡಲು ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಇದರೊಂದಿಗೆ ರಾಜಕೀಯವಾಗಿ ಕಾಂಗ್ರೆಸ್ ಶಾಸಕರು ಕಡೆಗಣಿಸಲ್ಪಡುತ್ತಿದ್ದಾರೆ. ಅನಿವಾರ್ಯವಾಗಿ ಮೈತ್ರಿ ಸರ್ಕಾರ ರಚಿಸಿದ್ದೇವೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಕಾರಣಕ್ಕೆ ಜೆಡಿಎಸ್ಗೆ ಮುಖ್ಯಮಂತ್ರಿ ಸ್ಥಾನವನ್ನೂ ಬಿಟ್ಟುಕೊಟ್ಟಿದ್ದೇವೆ. ಆದರೆ 80 ಮಂದಿ ಶಾಸಕರಿದ್ದರೂ ಸರ್ಕಾರ ನಮ್ಮದು ಎನಿಸುತ್ತಿಲ್ಲ. ನಮ್ಮ ಕಷ್ಟ ಕೇಳುವವರಿಲ್ಲ.ನಾವು ಮುಖ್ಯಮಂತ್ರಿಗಳ ಮನೆ ಬಾಗಿಲಿಗೆ ಹೋಗುವುದು ಸರಿಯಲ್ಲ. ನಮ್ಮ ಪಕ್ಷದವರೇ ಆದ ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿದ್ದಾರೆ. ಅವರು ನಮ್ಮ ಬಗ್ಗೆ ಕಾಳಜಿ ವಹಿಸಬೇಕು. ವಿಷಾದನೀಯ ಸಂಗತಿ ಎಂದರೆ ಪರಮೇಶ್ವರ್ ಅವರ ಮನೆಗೆ ನಮಗೆ ಪ್ರವೇಶವಿರುವುದಿಲ್ಲ. ಕಚೇರಿ ಬಳಿ ಹೋದರೆ ಕೈಗೆ ಸಿಗುವುದಿಲ್ಲ. ಇನ್ನು ರಸ್ತೆಯಲ್ಲಿ ಮಾತನಾಡಿಸಲೂ ಅವಕಾಶವಿರುವುದಿಲ್ಲ. ಅವರು ಝೀರೋ ಟ್ರಾಫಿಕ್ನಲ್ಲಿ ಮುನ್ನುಗ್ಗಿ ಹೋಗಿ ಬಿಡುತ್ತಾರೆ. ನಾವು ಯಾರ ಬಳಿ ಕಷ್ಟ ಹೇಳಿಕೊಳ್ಳಬೇಕು.
ದಿನಕ್ಕೆ ಒಂದು ಗಂಟೆಯಾದರೂ ಶಾಸಕರು, ವಿಧಾನಸಭೆ, ವಿಧಾನಪರಿಷತ್ ಸದಸ್ಯರ ಕಷ್ಟ ಕೇಳಲು ಸಮಯ ಮೀಸಲಿಡಿ. ಆನಂತರ ನಮ್ಮ ಅಹವಾಲುಗಳ ಬಗ್ಗೆಮುಖ್ಯಮಂತ್ರಿ ಕುಮಾರಸ್ವಾಮಿ ಬಳಿ ಚರ್ಚೆ ಮಾಡುವ ಪರಿಪಾಠ ಬೆಳೆಸಿಕೊಳ್ಳಿ. ಇಲ್ಲದೇ ಹೋದರೆ ನಮ್ಮಲ್ಲಿರುವ ಅನಾಥ ಪ್ರಜ್ಞೆ ನಿರಂತರವಾಗಿರುತ್ತದೆ. ಅದು ಸರ್ಕಾರದ ಮೇಲೆ ಪರಿಣಾಮ ಬೀರಿದರೆ ಅದಕ್ಕೆ ಶಾಸಕರನ್ನು ಹೊಣೆ ಮಾಡಲಾಗುವುದಿಲ್ಲ. ಪರಿಸ್ಥಿತಿ ಕೈ ಮೀರುವ ಮುನ್ನ ಎಚ್ಚೆತ್ತುಕೊಳ್ಳಿ ಎಂದು ಹೇಳಿದ್ದಾರೆ.