ಬೆಂಗಳೂರಿನಲ್ಲಿ ಜೆಡಿಎಸ್-ಕಾಂಗ್ರೇಸ್ ಶಾಸಕಾಂಗ ಜಂಟಿ ಸಭೆ ಕರೆಯಲಾಗುವುದು, ಮಾಜಿ ಸಿ.ಎಂ.ಸಿದ್ದರಾಮಯ್ಯ

ಬೆಳಗಾವಿ, ಡಿ.18-ಬಹುನಿರೀಕ್ಷಿತ ಕಾಂಗ್ರೆಸ್ ಶಾಸಕಾಂಗ ಸಭೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗೈರು ಹಾಜರಾದ ಹಿನ್ನೆಲೆಯಲ್ಲಿ ಈ ಅಧಿವೇಶನದ ನಂತರ ಬೆಂಗಳೂರಿನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಜಂಟಿ ಶಾಸಕಾಂಗ ಸಭೆ ಕರೆಯುವುದಾಗಿ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ವರ್ಗಾವಣೆ, ಸ್ಥಳೀಯ ಸಂಸ್ಥೆಗಳ ನೇಮಕಾತಿ, ಅಧಿಕಾರ ಹಂಚಿಕೆ ಸೇರಿದಂತೆ ಹಲವಾರು ವಿಷಯಗಳ ಕಾಂಗ್ರೆಸ್ ಶಾಸಕರು ಇಂದು ನಡೆದ ಶಾಸಕಾಂಗ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬರಪೀಡಿತ ತಾಲೂಕುಗಳನ್ನು ಸರ್ಕಾರ ಘೋಷಣೆ ಮಾಡಿದೆ. ಆದರೆ ಬಿಡುಗಡೆ ಮಾಡಿರುವುದು ಕೇವಲ 50 ಲಕ್ಷ ಮಾತ್ರ. ಇದರಲ್ಲಿ ಯಾವ ಕೆಲಸಗಳನ್ನೂ ಮಾಡಲಾಗುವುದಿಲ್ಲ. ವರ್ಗಾವಣೆ ವಿಷಯದಲ್ಲಿ ನಾವು ಹೇಳಿದ ಅಧಿಕಾರಿಗಳನ್ನು ಹಾಕಿಕೊಡುತ್ತಿಲ್ಲ. ಜೆಡಿಎಸ್ ನಾಯಕರು ನಿಯೋಜಿಸಿದ ಅಧಿಕಾರಿಗಳ ಕೈಯಿಂದ ಕೆಲಸ ಮಾಡಿಸಬೇಕು. ಆ ಅಧಿಕಾರಿಗಳು ನಮಗೆ ಬೆಲೆ ನೀಡುತ್ತಿಲ್ಲ. ನಮ್ಮ ಪಕ್ಷದ ಉಪಮುಖ್ಯಮಂತ್ರಿ ಹಾಗೂ ಸಚಿವರು ನಮ್ಮ ನೆರವಿಗೆ ಬರುತ್ತಿಲ್ಲ. ಅನುದಾನ ಬಿಡುಗಡೆ ವಿಷಯದಲ್ಲೂ ಕಾಂಗ್ರೆಸ್ ಶಾಸಕರಿಗೆ ತಾರತಮ್ಯವಾಗುತ್ತಿದೆ. ಜೆಡಿಎಸ್ ಶಾಸಕರಿಗೆ ಸಿಗುತ್ತಿರುವ ಮನ್ನಣೆ ನಮಗೆ ಇಲ್ಲವಾಗಿದೆ ಎಂದು ಬಹುತೇಕ ಶಾಸಕರು ತಮ್ಮ ಅಸಮಾಧಾನ ಹೊರ ಹಾಕಿದರು.

ಆ ವೇಳೆ ಮಧ್ಯಪ್ರವೇಶಿಸಿದ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು, ಕಳೆದ ಡಿಸೆಂಬರ್ 8 ರಂದು ಕಾಂಗ್ರೆಸ್ ಶಾಸಕಾಂಗ ಸಭೆ ನಡೆಸಿ ಕುಮಾರಸ್ವಾಮಿಯವರನ್ನು ಕರೆಸಬೇಕೆಂಬ ನಿರ್ಧಾರವಾಗಿತ್ತು. ಅದಕ್ಕೂ ಮೊದಲು ಸಮನ್ವಯ ಸಮಿತಿ ಸಭೆ ನಡೆದಿದ್ದರಿಂದ ಅಲ್ಲಿ ಚರ್ಚೆ ಮಾಡಿ ಬೆಂಗಳೂರಿನಲ್ಲೇ ಶಾಸಕಾಂಗ ಸಭೆ ನಡೆಸುವ ಬದಲಾಗಿ ಬೆಳಗಾವಿಯಲ್ಲಿ ನಡೆಸಬೇಕೆಂಬ ನಿರ್ಧಾರ ತೆಗೆದುಕೊಳ್ಳಲಾಯಿತು. ಇಂದಿನ ಸಭೆಗೆ ಕುಮಾರಸ್ವಾಮಿಯವರಿಗೆ ಆಹ್ವಾನ ನೀಡಿಲ್ಲ. ಹಾಗಾಗಿ ಅವರು ಬಂದಿಲ್ಲ. ನಿಮ್ಮ ಸಮಸ್ಯೆಗಳ ಬಗ್ಗೆ ಎಲ್ಲರೂ ಮಾತನಾಡಿದ್ದೀರ ಎಂದರು.

ಬೆಳಗಾವಿ ಅಧಿವೇಶನ ಮುಗಿದ ನಂತರ ಬೆಂಗಳೂರಿನಲ್ಲೇ ಶಾಸಕಾಂಗ ಸಭೆ ನಡೆಸಲಾಗುವುದು. ಅದರಲ್ಲಿ ಜೆಡಿಎಸ್-ಕಾಂಗ್ರೆಸ್ ಶಾಸಕರು ಭಾಗವಹಿಸುತ್ತಾರೆ. ಮುಖ್ಯಮಂತ್ರಿ ಕೂಡ ಭಾಗವಹಿಸುತ್ತಾರೆ. ಆಡಳಿತಾತ್ಮಕ ಹಾಗೂ ಅಭಿವೃದ್ಧಿ ವಿಷಯದಲ್ಲಿ ನಿಮ್ಮ ಯಾವುದೇ ಬೇಡಿಕೆಗಳಿದ್ದರೂ ಅಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳೋಣ ಎಂದು ಸಿದ್ದರಾಮಯ್ಯ ಸಲಹೆ ಮಾಡಿದ್ದಾರೆ.

ಸಭೆಯ ನಂತರ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕರಾದ ಎಚ್.ಕೆ.ಪಾಟೀಲ್ ಅವರು, ಶಾಸಕಾಂಗ ಸಭೆಯಲ್ಲಿ ಗಂಭೀರ ವಿಷಯಗಳು ಚರ್ಚೆಯಾಗಿವೆ.ಎಲ್ಲರೂ ತಮ್ಮ ಅಭಿಪ್ರಾಯ ಹೇಳಿದ್ದಾರೆ.ಅತ್ಯಂತ ಸೌಹಾರ್ದಯುತ ವಾತಾವರಣದಲ್ಲಿ ಗಂಭೀರ ವಿಷಯಗಳು ಚರ್ಚೆಯಾಗಿವೆ. ಎಲ್ಲದಕ್ಕೂ ಪರಿಹಾರ ದೊರಕುವ ವಿಶ್ವಾಸ ಇದೆ ಎಂದರು.

ಹಿರಿಯ ಶಾಸಕ ಎಂ.ಟಿ.ಬಿ.ನಾಗರಾಜ್ ಮಾತನಾಡಿ, ಅನುದಾನ ಹಂಚಿಕೆಯಲ್ಲಿ ತಾರತಮ್ಯ ವಿರುವ ಬಗ್ಗೆ , ಸ್ಥಳೀಯ ಸಂಸ್ಥೆಗಳ ನೇಮಕಾತಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಎಲ್ಲವನ್ನೂ ಸರಿಪಡಿಸುವುದಾಗಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ