ಕೊಲಂಬೊ: ಸುಪ್ರೀಂಕೋರ್ಟ್ನ ಎರಡು ಅದೇಶದ ಪರಿಣಾಮವಾಗಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಂದ ನೇಮಕವಾಗಿದ್ದ ಪ್ರಧಾನಮಂತ್ರಿ ಸ್ಥಾನಕ್ಕೆ ಮಹೀಂದಾ ರಾಜಪಕ್ಸ ಶನಿವಾರ ರಾಜೀನಾಮೆ ನೀಡಿದ್ದಾರೆ.
ಯುನೈಟೆಡ್ ಫ್ರೀಡಂ ಅಲೈಯನ್ಸ್ (ಯುಪಿಎಫ್ಎ) ಪ್ರತಿನಿಧಿಗಳಿಗೆ ರಾಜಪಕ್ಸೆ ಅವರು ರಾಜೀನಾಮೆ ನೀಡುವ ವಿಚಾರವನ್ನು ತಿಳಿಸಿದ್ದಾರೆ ಎಂದು ಸಂಸದ ಶೇಹಾನ್ ಸೀಮಾಸಿಂಘೆ ವರದಿಗಾರರಿಗೆ ತಿಳಿಸಿದ್ದಾರೆ.
ಪ್ರಧಾನಿಯಾಗಿದ್ದ ರಾನಿಲ್ ವಿಕ್ರಮಸಿಂಘೆ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಿ ರಾಜಪಕ್ಸೆ ಅವರನ್ನು ಪ್ರಧಾನಿಯನ್ನಾಗಿ ಅಕ್ಟೋಬರ್ 26ರಂದು ಅಧ್ಯಕ್ಷ ಸಿರಿಸೇನಾ ನೇಮಕ ಮಾಡಿದ್ದು ಸಾಕಷ್ಟು ವಿವಾದ ಸೃಷ್ಟಿಸಿತ್ತು. ಇದರಿಂದ ಶ್ರೀಲಂಕಾದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಇದೀಗ ತೆರವಾಗಿರುವ ಪ್ರಧಾನಮಂತ್ರಿ ಸ್ಥಾನವನ್ನು ವಿಕ್ರಮಸಿಂಘೆ ಅವರು ವಹಿಸಿಕೊಳ್ಳಲಿದ್ದಾರೆ.
ಮುಂದಿನ ತಿಂಗಳು ಸಂಪೂರ್ಣ ಬಹುಮತ ಸಾಬೀತು ಮಾಡುವವರೆಗೂ ಪ್ರಧಾನಿಮಂತ್ರಿಯಾಗಿ ಮುಂದುವರೆಯುವಂತೆ ಕೋರ್ಟ್ ನೀಡಿದ್ದ ಆದೇಶವನ್ನು ಶ್ರೀಲಂಕಾ ಸುಪ್ರೀಂಕೋರ್ಟ್ ತಡೆಹಿಡಿದ ಹಿನ್ನೆಲೆಯಲ್ಲಿ ರಾಜಪಕ್ಸ ರಾಜೀನಾಮೆ ನೀಡಿದ್ದಾರೆ. ಅಧ್ಯಕ್ಷ ಸಿರಿಸೇನಾ ಅವರು ಕಾನೂನುಬಾಹಿರವಾಗಿ ನೇಮಿಸಿರುವ ಸರ್ಕಾರವನ್ನು ವಿಸರ್ಜಿಸುವಂತೆ ಗುರುವಾರ ಸುಪ್ರೀಂಕೋರ್ಟ್ ಅದೇಶ ನೀಡಿತ್ತು.
ರಾಜಪಕ್ಸ ಪ್ರತಿನಿಧಿ ಲಕ್ಷ್ಮಣ್ ಯಪ ಅಬೆವಾರ್ದೆನಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಶುಕ್ರವಾರ ಅಧ್ಯಕ್ಷ ಸಿರಿಸೇನಾ ಅವರೊಂದಿಗೆ ನಡೆದ ಸಭೆಯಲ್ಲಿ ರಾಜಪಕ್ಸ ಅವರು ರಾಜೀನಾಮೆ ನೀಡುವ ತೀರ್ಮಾನ ಕೈಗೊಂಡು, ಹೊಸ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾಗಿ ತಿಳಿಸಿದರು.
ನೂತನ ಪ್ರಧಾನಿಯಾಗಿ ನಾಳೆ ವಿಕ್ರಮಸಿಂಘೆ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.