ನವದೆಹಲಿ: ಕಾವೇರಿ ನದಿ ನೀರು ವಿವಾದ ಸಂಸತ್ ನಲ್ಲಿ ಪ್ರತಿಧ್ವನಿಸಿದ್ದು, ತಮಿಳುನಾಡಿನ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಎಐಎಡಿಎಂಕೆ ಹಾಗೂ ಡಿಎಂಕೆ ಪಕ್ಷದ ನಾಯಕರು ರಾಜ್ಯಸಭೆ ಸದನದ ಬಾವಿಗೆ ಇಳಿದು ತೀವ್ರವಾಗಿ ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ರಾಜ್ಯಸಭಾ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದ ಪ್ರಸಂಗ ನಡೆಯಿತು.
ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಕೆಲ ಎಐಎಡಿಎಂಕೆ ಸದಸ್ಯರು ಸದನದ ಬಾವಿಗಿಳಿದು ಕಾವೇರಿ ವಿವಾದ ಕುರಿತಂತೆ ಪ್ರತಿಭಟನೆ ನಡೆಸಲು ಆರಂಭಿಸಿದರು. ಕಾವೇರಿ ನದಿ ಪಾತ್ರದ ರೈತರ ಜೀವನವನ್ನು ರಕ್ಷಣೆ ಮಾಡುವಂತೆ ಕೆಲ ಬ್ಯಾನರ್ ಗಳನ್ನು ಪ್ರದರ್ಶಿಸಿದರು.
ಇದೇ ವೇಳೆ ಡಿಎಂಕೆ ಸದಸ್ಯರೂ ಕೂಡ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಆರಂಭಿಸಿದರು. ಈ ವೇಳೆ ಸಭಾಪತಿ ವೆಂಕಯ್ಯ ನಾಯ್ಡು ಅವರು, ತಮ್ಮ ಸ್ಥಾನಗಳಿಗೆ ಮರಳುವಂತೆ ಸದಸ್ಯರಿಗೆ ಮನವಿ ಮಾಡಿಕೊಂಡರೂ, ಇದನ್ನು ಕೇಳದ ಸದಸ್ಯರು ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದರು.
ಸಾಕಷ್ಟು ಪಕ್ಷಗಳಿಂದ ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸುವಂತೆ ಮನವಿಗಳು ಬಂದಿವೆ. 267ರ ನಿಯಮದ ಪ್ರಕಾರ ಪ್ರಸ್ತುತ ಈ ವಿಚಾರವನ್ನು ಚರ್ಚೆ ನಡೆಸಲು ಸಾಧ್ಯವಿಲ್ಲ. ಎಲ್ಲಾ ವಿಚಾರಗಳ ಕುರಿತು ಚರ್ಚೆ ನಡೆಸಲಾಗುತ್ತದೆ ನಾಯ್ಡು ತಿಳಿಸಿದರು. ನಾಯ್ಡು ಅವರ ಹೇಳಿಕೆ ಬಳಿಕವೂ ಎಐಎಡಿಎಂಕೆ ಹಾಗೂ ಡಿಎಂಕೆ ನಾಯಕರು ಪ್ರತಿಭಟನೆ ಮುಂದುವರೆಸಿದರು.
ಜನರ ಭಾವನೆಗಳಿಗೆ ಗೌರವ ನೀಡಿ. ಈ ರೀತಿಯ ಪ್ರತಿಭಟನೆಯಲ್ಲಿ ನಾನು ಏನನ್ನೂ ಹೇಳುವುದಿಲ್ಲ ಎಂದ ವೆಂಕಯ್ಯ ನಾಯ್ಡು ಅವರು, ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.
Rajya Sabha, Adjourned, Cauvery,Tamil Nadu, Protest