ಡಿ.17 ರವರೆಗೆ ಉಳ್ಳಾಗಡ್ಡಿಗೆ ಪ್ರೋತ್ಸಾಹ ಧನ

ಹುಬ್ಬಳ್ಳಿ: ಉಳ್ಳಾಗಡ್ಡಿ ಬೆಳೆಗಾರರಿಗೆ ಪ್ರೋತ್ಸಾಹ ಧನ ವಿತರಣೆಗೆ ಅರ್ಜಿ ಕೊಡುವ ಹಾಗೂ ಸ್ವೀಕರಿಸುವ ಕೇಂದ್ರವನ್ನು ಇಲ್ಲಿಯ ಅಮರಗೋಳ ಎಪಿಎಂಸಿ ಆವರಣದಲ್ಲಿ ಆರಂಭಿಸಲಾಗಿದೆ. ಎಪಿಎಂಸಿ ಆವರಣದ ರೈತ ಸಂಪರ್ಕ ಕೇಂದ್ರದ ಬಳಿ ತಾತ್ಕಾಲಿಕ ಶೆಡ್​ನಲ್ಲಿ ಶನಿವಾರ ಬೆಳಗ್ಗೆ ಎಪಿಎಂಸಿ ಅಧ್ಯಕ್ಷ ಜಗನ್ನಾಥಗೌಡ ಸಿದ್ದನಗೌಡರ ಮತ್ತು ಸದಸ್ಯರು ಹಾಗೂ ಕಾರ್ಯದರ್ಶಿ ಎಸ್.ಬಿ. ನ್ಯಾಮಗೌಡ ಅವರು ಕೇಂದ್ರಕ್ಕೆ ಚಾಲನೆ ನೀಡಿದರು.

ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್ ಉಳ್ಳಾಗಡ್ಡಿಗೆ 700 ರೂ. ಮೂಲ ಬೆಲೆ ನಿಗದಿಪಡಿಸಿದ್ದು, ಬೆಳೆಗಾರರು ತಾವು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಉಳ್ಳಾಗಡ್ಡಿಗೆ ಇದಕ್ಕಿಂತ ಕಡಿಮೆ ಬೆಲೆ ನಿಗದಿಯಾದಲ್ಲಿ ವ್ಯತ್ಯಾಸದ ಹಣಕ್ಕೆ ಇಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಸರ್ಕಾರ ಗರಿಷ್ಠ 200 ರೂ. ತನಕ ಪ್ರೋತ್ಸಾಹ ಧನ ನೀಡಲಿದೆ.

ಏನಿದು ಯೋಜನೆ?
2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಉಳ್ಳಾಗಡ್ಡಿ ಉತ್ಪಾದನಾ ವೆಚ್ಚ ಆಧರಿಸಿ ಪ್ರತಿ ಕ್ವಿಂಟಾಲ್​ಗೆ 700 ರೂ. ಮೂಲ ಬೆಲೆಯಾಗಿ ಪರಿಗಣಿಸಲಾಗಿದೆ. ಹುಬ್ಬಳ್ಳಿ ಎಪಿಎಂಸಿಯಲ್ಲಿ ನೋಂದಾಯಿತ ವರ್ತಕರಿಗೆ ಮಾರಾಟವಾಗುವ ಉಳ್ಳಾಗಡ್ಡಿಗೆ ಮಾತ್ರ ವ್ಯತ್ಯಾಸದ ಮೊತ್ತ ಗರಿಷ್ಠ ಪ್ರತಿ ಕ್ವಿಂಟಾಲ್​ಗೆ 200 ರೂ.ಗಳನ್ನು ನೇರವಾಗಿ ಆಧಾರ್ ಸಂಖ್ಯೆ ಜೋಡಣೆಯಾದ ರೈತರ ಖಾತೆಗೆ ತೋಟಗಾರಿಕೆ ಇಲಾಖೆಯಿಂದ ಜಮಾ ಮಾಡಲಾಗುತ್ತದೆ.

ಈ ಸೌಲಭ್ಯ ಡಿ. 17ರ ವರೆಗೆ ಜಾರಿಯಲ್ಲಿ ರಲಿದ್ದು, ರೈತರು ಪ್ರಯೋಜನ ಪಡೆಯಲು ಕೋರಲಾಗಿದೆ. ರಾಜ್ಯ ಸರ್ಕಾರ ನಿಗದಿಪಡಿಸಿದ 700 ರೂ.ಗಿಂತ ಹೆಚ್ಚಿನ ಧಾರಣೆಗೆ ಉಳ್ಳಾಗಡ್ಡಿ ಮಾರಾಟವಾದರೆ ವ್ಯತ್ಯಾಸದ ಮೊತ್ತ ನೀಡುವುದಿಲ್ಲ. ಪ್ರತಿ ಎಕರೆಗೆ 30 ಕ್ವಿಂಟಾಲ್​ನಂತೆ ಗರಿಷ್ಠ (2.5 ಎಕರೆ) 75 ಕ್ವಿಂಟಾಲ್​ವರೆಗೆ ಉಳ್ಳಾಗಡ್ಡಿ ಖರೀದಿಸಲಾಗುವುದು. ಮಾರಾಟಕ್ಕೆ ತರುವ ರೈತರು 2018-19 ನೇ ಸಾಲಿನ ಪಹಣಿ, ಆಧಾರ್ ಗುರುತಿನ ಪತ್ರದೊಂದಿಗೆ ಆಗಮಿಸಿ ಅರ್ಜಿ ಸಲ್ಲಿಸಬೇಕು. ಈಗಾಗಲೇ ಮಾರಾಟ ಮಾಡಿದ ರೈತರು ದರ 700ಕ್ಕಿಂತ ಕಡಿಮೆ ಇದ್ದರೆ ವ್ಯಾಪಾರಸ್ಥರಿಂದ ದೃಢೀಕರಣ ಪತ್ರ ತರಬೇಕು. ಅಂತಹ ರೈತರ ಖಾತೆಗೆ ವ್ಯತ್ಯಾಸದ ಹಣ ಜಮಾ ಮಾಡಲಾಗುತ್ತದೆ. ಈ ಕುರಿತು ಸಮಸ್ಯೆಗಳಿದ್ದಲ್ಲಿ ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಅಥವಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಕೋರಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ