ಶಾಸಕ ಅರವಿಂದ ಬೆಲ್ಲದ ವಿರುದ್ಧ ರೊಚ್ಚಿಗೆದ್ದ ಮುರುಘಾ ಮಠದ ಭಕ್ತರು

ಧಾರವಾಡ: ಶಾಸಕ ಅರವಿಂದ ಬೆಲ್ಲದ ಅವರು ಮುರುಘಾಮಠದ ಕುರಿತು ನೀಡಿರುವ ನೀಡಿರುವ ಹೇಳಿಕೆ ಸರಿಯಲ್ಲ. ಇನ್ನಾದರೂ ಅವರು ಶ್ರೀ ಮಠದ ಘನತೆಗೆ ಚ್ಯುತಿ ಬರದಂತೆ ತಮ್ಮ ಹೇಳಿಕೆ ನೀಡುವುದನ್ನು ಬಿಡಬೇಕೆಂದು ಶ್ರೀಮಠದ ಆಡಳಿತ ಮಂಡಳಿ ಸದಸ್ಯರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಸತೀಶ ತುರಮುರಿ, ನಾಗರಾಜ ಪಟ್ಟಣಶೆಟ್ಟಿ ಅವರು, ಯಾರದೋ ಮಾತನ್ನು ಕೇಳಿ ಶ್ರೀಮಠದ ಕುರಿತು ಮಾತನಾಡುವುದು ಸರಿಯಲ್ಲ ಇನ್ನಾದರೂ ಮಠದ ಘನತೆಗೆ ಚ್ಯುತಿಬರದಂತೆ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಕಳೆದ ಎಂಟು ವರ್ಷಗಳ ಹಿಂದೆ ಶ್ರೀಮುರುಘಾಮಠದಲ್ಲಿ ನಡೆದ ಎಲ್ಲ ಬೆಳವಣಿಗೆಗಳ ಕುರಿತು ಮಾಹಿತಿ ಬೇಕಿದ್ದರೆ ಅರವಿಂದ ಬೆಲ್ಲದ ಅವರು ಶ್ರೀಮಠಕ್ಕೆ ಆಗಮಿಸಿ ಹಾಲಿ ಪೀಠಾಧಿಪತಿಗಳ ಹಾಗೂ ಆಡಳಿತ ಮಂಡಳಿಯ ಸದಸ್ಯರ ಬಳಿಗೆ ಸುಧೀರ್ಘ ಚರ್ಚೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಿತ್ತು. ಅದು ಆಗದಿದ್ದರೆ ತಮ್ಮ ತಂದೆ ಚಂದ್ರಕಾಂತ ಬೆಲ್ಲದ ಅವರ ಬಳಿ ಕೇಳಿ ತಿಳಿಯಲಿ. ಅದನ್ನು ಮಾಡದೆ ಮಾಧ್ಯಮದ ಮುಂದೆ ಆಡಳಿತ ಮಂಡಳಿಯವರ ವರ್ತನೆ ಕುರಿತು ಬೇಜವಾಬ್ದಾರಿ ಹೇಳಿಕೆ ನೀಡುವುದು ಅವರ ಘನತೆಗೆ ತಕ್ಕುದಲ್ಲ ಎಂದು ದೂರಿದರು.

ಹಿಂದಿನ ಪೀಠಾಧಿಪತಿಗಳ ಕುರಿತು ನಾವು ಹೇಳುವುದು ಏನೂ ಇಲ್ಲ. ಅದು ಈಗಾಗಲೇ ಮುಗಿದ ಅಧ್ಯಾಯ. ಅವರು ಶ್ರೀಮಠವನ್ನು ಇಪ್ಪತ್ತು ವರ್ಷಗಳಲ್ಲಿ ಯಾವ ಸ್ಥಿತಿಗೆ ತಂದಿದ್ದರು ಎಂಬುದು ಸದ್ಭಕ್ತರಿಗೆ ತಿಳಿದಿದೆ.

ಅಂಥವರ ಮಾತಿಗೆ ನಾವು ಉತ್ತರಿಸುವ ಅಗತ್ಯವಿಲ್ಲ. ಆದರೆ ಶಾಸಕ ಸ್ಥಾನದಲ್ಲಿದ್ದುಕೊಂಡು ಮಠದಲ್ಲಿ ಗುಂಡಾಗಿರಿ ನಡೆದಿದೆ. ದಾರ್ಮಿಕ ಕ್ಷೇತ್ರದಲ್ಲಿ ವಿನಯ ಕುಲಕರ್ಣಿ ಅಂತಹವರು ಇರುವುದು ಶೋಭೆಯಲ್ಲ
ಎಂಬ ಹೇಳಿಕೆ ಖೇದಕರ ಎಂದರು.

ಈ ಮಾತುಗಳನ್ನು ಹೇಳುವ ಮುನ್ನ ಅವರ ತಂದೆ ಚಂದ್ರಕಾಂತ ಬೆಲ್ಲದ ಹಾಗೂ ಮಠದ ಆಡಳಿತ ಮಂಡಳಿಯ ಸದಸ್ಯರು ಆದ ಚಿಕ್ಕಪ್ಪ ಶಿವಣ್ಣ ಬೆಲ್ಲದರ ಜೊತೆ ಕುರಿತು ಚರ್ಚಿಸಿದ್ದರೆ ನಿಜ ಅರಿವಾಗುತ್ತಿತ್ತು. ಧಾರ್ಮಿಕ ಕ್ಷೇತ್ರದಲ್ಲಿ ವಿನಯ ಕುಲಕರ್ಣಿ ಅವರು ಗುಂಡಾಗಿರಿ ವರ್ತನೆ ಮಾಡಬಾರದು ಎನ್ನುವ ಹೇಳಿಕೆಯನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದರು.

ಹಿಂದಿನ ಪೀಠಾಧಿಪತಿಗಳನ್ನು ಯಾರೂ ಹೊರಗೆ ಕಳುಹಿಸಿಲ್ಲ. ಅವರೇ ಸ್ವಯಂ ಪ್ರೇರಿತರಾಗಿ ಪೀಠತ್ಯಾಗ ಮಾಡಿ ಹೋಗಿದ್ದಾರೆ. ಈ ವಿಷಯದ ಕುರಿತು ಆ ಸಂದರ್ಭದಲ್ಲಿ ಸ್ವತಃ ಚಂದ್ರಕಾಂತ ಬೆಲ್ಲದ ಅವರ ಮನೆಯಲ್ಲಿ ಸಮಾಜದ ಸಭೆ ಕೂಡಾ ಜರುಗಿವೆ. ಅಲ್ಲಿ ಚಂದ್ರಕಾಂತ ಬೆಲ್ಲದ ಅವರು ವಿನಯ ಕುಲಕರ್ಣಿ ಮತ್ತು ಇತರ ಭಕ್ತರಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಕೂಡಾ ಮಾಡಿದ್ದರು ಎಂದರು.

ಈ ಎಲ್ಲ ಬೆಳವಣಿಗೆಗಳು ನಡೆದಿರುವುದನ್ನು ಅರಿಯದೇ ವಿನಯ ಕುಲಕರ್ಣಿ ವಿರುದ್ಧ ಹೇಳಿಕೆ ನೀಡುವುದನ್ನು ಸಹಿಸುವುದಿಲ್ಲ. ಎಂಟು ವರ್ಷದ ಹಿಂದೆ ನಡೆದ ಎಲ್ಲ ಬೆಳವಣಿಗೆಗಳಿಗೆ ಸಮಸ್ತ ಸಮಾಜ ಭಾಂದವರ ಅಪೇಕ್ಷೆ ಕಾರಣ ಹೊರತು ಒಬ್ಬ ವ್ಯಕ್ತಿಯು ಕಾರಣವಲ್ಲ ಎಂದು ಶಾಸಕ ಅರವಿಂದ ಬೆಲ್ಲದ ವಿರುದ್ದ ತಿರುಗೇಟು ನೀಡಿದ್ದಾರೆ.

ಈಗ ಅರವಿಂದ ಬೆಲ್ಲದ ಅವರು ಮುಖಂಡರ ಒತ್ತಡಕ್ಕೆ ಮಣಿದು ಇದನ್ನು ರಾಜಕೀಯ ದುರುದ್ಧೇಶದಿಂದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.

ಅರವಿಂದ ಬೆಲ್ಲದ ಅವರು ಮಠಕ್ಕೆ ವಾರಕೊಮ್ಮೆಯಾದರೂ ಭೇಟಿ ನೀಡಿ, ಆಡಳಿತ ಮಂಡಳಿಯ ಆಗು ಹೋಗು ತಿಳಿದುಕೊಳ್ಳಲು ಪ್ರಯತ್ನಿಸಲಿ. ಅವರು ಲಿಂಗಾಯತ ಸಮಾಜದ ಮುಖಂಡರು. ಪ್ರಮುಖವಾಗಿ ಮಠದ ಸದ್ಭಕ್ತರು ಎಂಬುದನ್ನು ಮರೆಯಬಾರದು. ಅಲ್ಲದೆ, ಅವರು ಒಬ್ಬ ಶಾಸಕರು. ಆದರೆ ಮಠದ ದಾಸೋಹ ಸ್ವೀಕರಿಸಿದ ಅನೇಕರು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು, ಕೆಲವರು ಇವರಿಗಿಂತ ದೊಡ್ಡ ಹುದ್ದೆಯಲ್ಲಿದ್ದಾರೆ ಎಂದು ಕುಟುಕಿದರು.

ಶ್ರೀ ಮಠದ ವಿರುದ್ದ ತಮ್ಮ ರಾಜಕೀಯ ದುರುದ್ದೇಶಕ್ಕೆ ಯಾರೇ ಎಷ್ಟೊಂದು ದೊಡ್ಡವರಾದರೂ ಹೇಳಿಕೆ ನೀಡಿದರೆ, ಮಠದ ಘನತೆಗೆ ಧಕ್ಕೆ ತಂದರೆ ಅವನತಿ ಖಚಿತ ಎಂದು ಗುಡುಗಿದರು.

ಮುರುಘಾ ಮಠದ ಅಭಿವೃದ್ಧಿಗೆ ವಿನಯ ಕುಲಕರ್ಣಿ ಅವರ ಕುಟುಂಬ ಸಾಕಷ್ಟು ಕೊಡುಗೆ ನೀಡಿದೆ. ಅದನ್ನು ಸ್ಮರಿಸುವುದು ಬಿಟ್ಟು ಅವರ ಮನಸ್ಸಿಗೆ ಘಾಸಿಯಾಗುವ ರೀತಿಯಲ್ಲಿ ಹೇಳಿಕೆ ನೀಡುವುದು ಸರಿಯಲ್ಲ. ಆದ್ದರಿಂದ ಶಾಸಕ ಅರವಿಂದ ಬೆಲ್ಲದ ತಮ್ಮ ಹೇಳಿಕೆಯನ್ನು ಒಂದು ವಾರದೊಳಗೆ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಅವರ ವಿರುದ್ದ ಮುರುಘಾ ಮಠದ ಭಕ್ತರು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಡಿ.ಬಿ. ಲಕಮನಹಳ್ಳಿ,ರಾಜು ಮರಳಪ್ಪನವರ, ರವೀಂದ್ರ ವಸ್ತ್ರದ, ಬಸಯ್ಯ ಗಣಾಚಾರಿ, ಶಿವಶರಣ ಕಲಬಶೆಟ್ಟರ, ವಿರುಪಾಕ್ಷಪ್ಪ ಮಟ್ಟಿ, ಮಂಜುನಾಥ ಸಾಲಿಮಠ, ಶಿವಣ್ಣ ಹೊಸೂರ, ಶಿವಯೋಗಿ ಇತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ