ಬೆಂಗಳೂರು, ಡಿ.8-ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದರಿಂದ ಅಸಮಾಧಾನಗೊಂಡಿರುವ ಕಾಂಗ್ರೆಸ್ನ ಹಲವು ಶಾಸಕರು ಬೆಳಗಾವಿ ಅಧಿವೇಶನಕ್ಕೆ ಗೈರಾಗುವುದರ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಲು ಮುಂದಾಗಿರುವುದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಸುಮಾರು 25ಕ್ಕೂ ಹೆಚ್ಚು ಸಚಿವಾಕಾಂಕ್ಷಿಗಳು ಅಧಿವೇಶನಕ್ಕೆ ಗೈರು ಹಾಜರಾಗುವ ಮೂಲಕ ಹೈಕಮಾಂಡ್ ವಿರುದ್ಧದ ಸಿಟ್ಟನ್ನು ಹೊರ ಹಾಕಲು ಮುಂದಾಗಿದ್ದಾರೆ.
ಕಳೆದ ಆರು ತಿಂಗಳಿನಿಂದ ಸಚಿವ ಸಂಪುಟ ವಿಸ್ತರಣೆ ಮಾಡದಂತೆ ಹಲವಾರು ನೆಪಗಳನ್ನು ಹೇಳಿಕೊಂಡು ಮುಂದೂಡಲಾಗುತ್ತಿದೆ. ಈಗ ಸರ್ಕಾರಕ್ಕೆ ಪಾಠ ಕಲಿಸಲು ತಕ್ಕ ಸಮಯ ಬಂದಿದೆ. ಸದನಕ್ಕೆ ಗೈರಾಗಲು ಹಲವರು ನಿರ್ಧರಿಸಿದ್ದು, ಸಚಿವರು ಹಾಗೂ ಕಾಂಗ್ರೆಸ್ ಮುಖಂಡರ ನಿದ್ದೆಗೆಡಿಸಿದೆ.
ಬೆಳಗಾವಿಯಲ್ಲಿ ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಈ ಸಂದರ್ಭದಲ್ಲಿ ಮಹತ್ವದ ಮಸೂದೆಗಳನ್ನು ಮಂಡಿಸಿ ಅಂಗೀಕಾರ ಪಡೆಯಲು ಸರ್ಕಾರ ನಿರ್ಧರಿಸಿದೆ. ಅತೃಪ್ತರು ಗೈರಾದಾರೆ ಮಸೂದೆಗಳ ಅಂಗೀಕಾರಕ್ಕೆ ಧಕ್ಕೆಯಾಗಿ ಸರ್ಕಾರ ಮುಜುಗರಕ್ಕೀಡಾಗಬೇಕಾಗುತ್ತದೆ.
ಅಧಿವೇಶನ ಮುಗಿದ ಮರುದಿನವೇ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದರಾದರೂ ಶೂನ್ಯಮಾಸದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲು ಸಾಧ್ಯವಿಲ್ಲ. ಸುಮ್ಮನೆ ಇಂತಹ ನೆಪಗಳನ್ನು ಹೇಳುತ್ತಾರೆ. ಈ ಬಗ್ಗೆ ನಂಬಿಕೆಯೂ ಇಲ್ಲ. ಹೀಗಾಗಿ ತಮ್ಮ ವಿರೋಧವನ್ನು ಅಧಿವೇಶನಕ್ಕೆ ಗೈರಾಗುವ ಮೂಲಕ ವ್ಯಕ್ತಪಡಿಸಲು ಹಲವು ಶಾಸಕರು ಮುಂದಾಗಿರುವುದು ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ.
ಶಾಸಕರು, ವಿಧಾನಪರಿಷತ್ ಸದಸ್ಯರು ಕಡ್ಡಾಯವಾಗಿ ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ನಿರ್ದೇಶನ ನೀಡಲು ಮುಖ್ಯ ಸಚೇತಕರಿಗೆ ಸೂಚಿಸಲಾಗಿದೆ. ಅವರು ಈಗಾಗಲೇ ಶಾಸಕರಿಗೆ ಸೂಚನೆ ಕೂಡ ನೀಡಿದ್ದಾರೆ. ಆದರೆ ಹಲವು ಶಾಸಕರು ಈಗಾಗಲೇ ಸ್ಪೀಕರ್ಗೆ ಸಕಾರಣಗಳನ್ನು ನೀಡಿ ಸದನಕ್ಕೆ ಗೈರಾಗಲು ಮುಂದಾಗಿದ್ದಾರೆ.
ಅನಾರೋಗ್ಯ ಇನ್ನಿತರ ಕಾರಣಗಳನ್ನು ನೀಡಿ ಸದನಕ್ಕೆ ಗೈರಾದರೆ ಮುಖ್ಯ ಸಚೇತಕರು ವಿಪ್ ನೀಡಲು ಸಾಧ್ಯವಾಗುವುದಿಲ್ಲ. ಅತೃಪ್ತ ಶಾಸಕರ ಈ ನಿರ್ಧಾರದಿಂದ ಸರ್ಕಾರ ಸಂಕಷ್ಟ ಪರಿಸ್ಥಿತಿಗೆ ಬಂದು ನಿಂತಿದೆ.
ಮಧ್ಯ ಕರ್ನಾಟಕದ ಸುಮಾರು 25ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಸದನಕ್ಕೆ ಗೈರಾಗಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಇವರ ಮೇಲೆ ನಿಗಾ ವಹಿಸಬೇಕು. ಕಡ್ಡಾಯವಾಗಿ ಸದನದಲ್ಲಿ ಹಾಜರಿರುವಂತೆ ನೋಡಿಕೊಳ್ಳಬೇಕು ಎಂದು ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಪಕ್ಷದ ಮುಖಂಡರಿಗೆ ಹೈಕಮಾಂಡ್ ನಾಯಕರು ಸೂಚಿಸಿದ್ದಾರೆ. ಯಾವುದೇ ಕಾರಣಕ್ಕೂ ಬೆಳಗಾವಿ ಅಧಿವೇಶನದಲ್ಲಿ ಮುಜುಗರದ ಸನ್ನಿವೇಶ ಸೃಷ್ಟಿಯಾಗಬಾರದೆಂಬ ಖಡಕ್ ಸೂಚನೆಯನ್ನು ನೀಡಿದ್ದಾರೆ.
ಈ ಎಲ್ಲದರ ನಡುವೆಯೂ ಶಾಸಕರು ಗೈರಾಗಲು ಮುಂದಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕಬ್ಬು ಬೆಳೆಗಾರರ ಸಮಸ್ಯೆ, ರೈತರ ಆತ್ಮಹತ್ಯೆ, ಉತ್ತರ ಕರ್ನಾಟಕದ ನೀರಾವರಿ ಸಮಸ್ಯೆ, ಗಡಿ ನಾಡ ಸಮಸ್ಯೆ, ಬರ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿಗೆ ಸರ್ಕಾರ ಪರಿಹಾರ ಕಂಡುಕೊಳ್ಳಬೇಕಿದೆ.
ಈ ನಡುವೆ ಆಡಳಿತಾರೂಢ ಪಕ್ಷದ ಶಾಸಕರು ಅಧಿವೇಶನಕ್ಕೆ ಕೈ ಕೊಡಲು ಮುಂದಾಗಿರುವುದು ಮಹತ್ವದ ಮಸೂದೆಗಳ ಅಂಗೀಕಾರಕ್ಕೆ ಅಡ್ಡಿಯಾಗುತ್ತಿರುವುದು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ನೇಹಿತರ ಮಗನ ಮದುವೆಗೆಂದು ಇದೇ ಸಂದರ್ಭದಲ್ಲಿ ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಸಚಿವಾಕಾಂಕ್ಷಿಗಳಾಗಿರುವ ಬಹುತೇಕರು ಸಿದ್ದು ಬೆಂಬಲಿಗರೇ ಅಧಿವೇಶನಕ್ಕೆ ಗೈರು ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ.
ಭಿನ್ನ ಮತ ಬಂಡಾಯ ತೀವ್ರ ಉಲ್ಬಣಗೊಂಡು ಮೈತ್ರಿ ಸರ್ಕಾರಕ್ಕೆ ಧಕ್ಕೆಯಾದರೆ ಪರಿಸ್ಥಿತಿಯ ಲಾಭ ಪಡೆದು ಸರ್ಕಾರ ರಚನೆ ಮಾಡಲು ಪ್ರತಿಪಕ್ಷ ಬಿಜೆಪಿ ಚಾತಕ ಪಕ್ಷಿಯಂತೆ ಕಾಯುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಆಯಾ ಕ್ಷೇತ್ರದ ಶಾಸಕರನ್ನು ಸದನದಲ್ಲಿ ಹಾಜರಿರುವಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ವಹಿಸಲಾಗಿದೆ ಎಂದು ತಿಳಿದುಬಂದಿದೆ.