ಮುಂಬೈ, ಮಾ.9- ಯುಪಿಎ ಅಧ್ಯಕ್ಷೆ ಹಾಗೂ ಕಾಂಗ್ರೆಸ್ ಮಾಜಿ ಅಧಿನಾಯಕಿ ಸೋನಿಯಾಗಾಂಧಿ ಅವರು ಇಂದು ವಿವಿಧ ವಿಷಯಗಳ ಬಗ್ಗೆ ಪ್ರಸ್ತಾಪಿಸಿ ತಮ್ಮ ಭಾಷಣದಲ್ಲಿ ಆತ್ಮಾವಲೋಕನ ಮಾಡಿಕೊಂಡಿದ್ದಾರೆ.
ಮುಂಬೈನಲ್ಲಿ ಇಂಡಿಯಾ ಟುಡೆ ಸಮಾವೇಶ ಉದ್ದೇಶಿಸಿ ಮಾತನಾಡಿದ ಸೋನಿಯಾ, ಸಾಂಸ್ಥಿಕ ಮಟ್ಟದಲ್ಲಿ ಜನರೊಂದಿಗೆ ಸಂಪರ್ಕ ಸಾಧಿಸಲು ಕಾಂಗ್ರೆಸ್ ಹೊಸ ಶೈಲಿಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
2004ರಲ್ಲಿ ತಮ್ಮ ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ನಾಯಕತ್ವ ಕುರಿತ ವಿಷಯವನ್ನು ಪ್ರಸ್ತಾಪಿಸಿದ ಅವರು, ನನಗಿಂತಲೂ ಡಾ.ಮನಮೋಹನ್ಸಿಂಗ್ ಅವರೇ ಉತ್ತಮ ಎಂಬ ಕಾರಣಕ್ಕಾಗಿ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಲಾಯಿತು ಎಂದು ಹೇಳಿದರು.
ತಾವು 19 ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪಕ್ಷ ಕೈಗೊಂಡ ಬಲವರ್ಧನೆ ಮತ್ತು ಸಂಘಟನೆ ಕುರಿತು ಅವರು ಪ್ರಸ್ತಾಪಿಸಿದರು.