ಮೇಕೆದಾಟು, ಡಿ.7-ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಮೇಕೆದಾಟು ಸಮತೋಲನ ಜಲಾಶಯ ಯೋಜನೆಯಡಿ 440 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದರು.
ಮೇಕೆದಾಟು ಸಮೀಪ ನಿರ್ಮಿಸಲು ಉದ್ದೇಶಿಸಿರುವ ಜಲಾಶಯಕ್ಕಾಗಿ ಸ್ಥಳ ಪರಿಶೀಲನೆ ಕೈಗೊಂಡ ಸಂದರ್ಭದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗುವ ನೀರಿನ ಸದ್ಬಳಕೆಗಾಗಿ ರೂಪಿಸಿರುವ ಈ ಯೋಜನೆಗೆ ಪ್ರಾಥಮಿಕ ಯೋಜನಾ ವರದಿಯನ್ನು 5912 ಕೋಟಿ ರೂ.ವೆಚ್ಚದಲ್ಲಿ ರೂಪಿಸಲಾಗಿದ್ದು, ಇದರಡಿ ಒಂದು ಎಕರೆ ಕೂಡ ನೀರಾವರಿ ಮಾಡಲು ಆಗುವುದಿಲ್ಲ. ರಾಜ್ಯಸರ್ಕಾರದ ಶೇ.95ರಷ್ಟು ಭೂಮಿ ಹಾಗೂ ಖಾಸಗಿಯವರ ಶೇ.5ರಷ್ಟು ಭೂಮಿಯನ್ನು ಈ ಯೋಜನೆಗೆ ಬಳಸಲು ಉದ್ದೇಶಿಸಲಾಗಿದೆ.ಇದಕ್ಕಾಗಿ ಖಾಸಗಿಯವರು ಸಹ ಭೂಮಿ ನೀಡಲು ಸಮ್ಮತಿಸಿದ್ದಾರೆ ಎಂದು ವಿವರಿಸಿದರು.
ಯಾವುದೇ ಸಮಸ್ಯೆ ಇಲ್ಲದೆ ಯೋಜನೆ ಕಾರ್ಯಗತವಾಗಲಿದ್ದು, 67 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮಥ್ರ್ಯದ ಜಲಾಶಯದಿಂದ 440 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಧ್ಯವಿದೆ.ಅಲ್ಲದೆ, ಸಂಗ್ರಹಿಸಿರುವ ನೀರನ್ನು ಮಾಸಿಕವಾರು ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ತಮಿಳುನಾಡಿಗೆ ಬಿಡಲು ಅನುಕೂಲವಾಗಲಿದೆ.
ಈ ವರ್ಷ ಹೆಚ್ಚುವರಿಯಾಗಿ ತಮಿಳುನಾಡಿಗೆ 450 ಟಿಎಂಸಿ ನೀರು ಹರಿದು ಹೋಗಿದ್ದು, ಹೆಚ್ಚುವರಿಯಾಗುವ ನೀರನ್ನು ವಿದ್ಯುತ್ ಹಾಗೂ ಕುಡಿಯುವ ನೀರಿಗಾಗಿ ಬಳಸಲಾಗುತ್ತದೆ.ಕೃಷಿ ಮಾಡಲು ಈ ಪ್ರದೇಶದಿಂದ 1500 ಅಡಿ ಎತ್ತರಕ್ಕೆ ನೀರನ್ನು ಪಂಪ್ ಮಾಡಬೇಕಾಗುತ್ತದೆ. ಹಾಗಾಗಿ ಒಂದೇ ಒಂದು ಎಕರೆಗೂ ನೀರನ್ನು ಬಳಕೆ ಮಾಡಲಾಗುವುದಿಲ್ಲ.
ಕಾವೇರಿ ನ್ಯಾಯಾಧೀಕರಣ 192 ಟಿಎಂಸಿ ಅಡಿ ನೀರು ತಮಿಳುನಾಡಿಗೆ ಹರಿಸಲು ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಮಾರ್ಪಡಿಸಿ 14.5 ಟಿಎಂಸಿ ನೀರನ್ನು ಕಡಿಮೆ ಮಾಡಿ ಒಟ್ಟು ವಾರ್ಷಿಕ 177.25 ಟಿಎಂಸಿ ನೀರು ತಮಿಳುನಾಡಿಗೆ ಕೊಡಲು ಸೂಚಿಸಿತ್ತು.ಅದರಂತೆ ನೀರು ಹರಿಸಲಾಗುವುದು ಎಂದರು.
ವಿವರ: ಕೇಂದ್ರ ಜಲ ಆಯೋಗ ಈ ಯೋಜನೆಗೆ ಸಮ್ಮತಿ ಸೂಚಿಸಿ ಯೋಜನಾ ವರದಿ ಸಿದ್ದಪಡಿಸಲು ತಿಳಿಸಿರುವ ಹಿನ್ನೆಲೆಯಲ್ಲಿ ಪೂರ್ವಭಾವಿ ಜಲಾಶಯ ನಿರ್ಮಾಣ ಸ್ಥಳ, ನದಿಯ ಹರಿವು, ಜಲಾಶಯ ನಿರ್ಮಾಣ ಸ್ಥಳದಲ್ಲಿರುವ ಅರಣ್ಯ, ಕಂದಾಯ ಭೂಮಿಗಳ ಪರಿಶೀಲನೆ ನಡೆಸಲಾಯಿತು.
ವಿದ್ಯುತ್ ಉತ್ಪಾದನೆ, ಕುಡಿಯುವ ನೀರು ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೂ ಆದ್ಯತೆ ನೀಡಲಾಗುತ್ತಿದ್ದು, ಒಟ್ಟು ಐದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ. ಇದರಲ್ಲಿ 296 ಹೆಕ್ಟೇರ್ ಕಂದಾಯ ಭೂಮಿ, 600 ಹೆಕ್ಟೇರ್ ಕೃಷಿ ಭೂಮಿ ಹಾಗೂ ಅರಣ್ಯ ಪ್ರದೇಶ ಮುಳುಗಡೆಯಾಗುತ್ತಿದ್ದು, ಸುಮಾರು ಆರು ಸಾವಿರ ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ.
ಮಂಡ್ಯ, ರಾಮನಗರ, ಚಾಮರಾಜನಗರ ಜಿಲ್ಲೆಗಳು ಒಳಗೊಳ್ಳುವಂತೆ ಪ್ರಮುಖವಾಗಿ ಮಳವಳ್ಳಿ, ಕನಕಪುರ ಗಡಿ ಹಾಗೂ ಕೊಳ್ಳೇಗಾಲ ಕೆಲ ಭಾಗಗಳು ಈ ಯೋಜನೆ ವ್ಯಾಪ್ತಿಗೆ ಬರಲಿವೆ.
ಜಲಾಶಯ ಒಟ್ಟು 66.85 ಟಿಎಂಸಿ ಅಡಿ ನೀರು ಸಂಗ್ರಹಿಸುವ ಸಾಮಥ್ರ್ಯ ಹೊಂದಲಿದ್ದು, 674.5ಮೀಟರ್ ಉದ್ದದ ಅಣೆಕಟ್ಟೆಯನ್ನು ನಿರ್ಮಿಸಲು ಚಿಂತನೆ ನಡೆದಿದೆ.
ಹೆಚ್ಚುವರಿ ಮಳೆಯಿಂದ ಸಮುದ್ರಕ್ಕೆ ಹರಿಯುವ ನೀರನ್ನು ಸಂಗ್ರಹಿಸಿ ಈ ಯೋಜನೆ ಮೂಲಕ ಸದ್ಬಳಕೆ ಮಾಡಿಕೊಳ್ಳಲು ಚಿಂತನೆ ನಡೆದಿದ್ದು, ಇದರಿಂದ ತಮಿಳುನಾಡಿಗೆ ಶೇ.90ರಷ್ಟು ಉಪಯೋಗವಾಗಲಿದೆ.ಎರಡೂ ರಾಜ್ಯಗಳಿಗೆ ಅನುಕೂಲವಾಗಲಿದೆ.
ಸಂಸದ ಡಿ.ಕೆ.ಸುರೇಶ್, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್‍ಸಿಂಗ್ ಸೇರಿದಂತೆ ನೀರಾವರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಪರಿಶೀಲನೆ ಸಂದರ್ಭದಲ್ಲಿ ಹಾಜರಿದ್ದರು.