ಮೇಕೆದಾಟು ಯಾಜನೆಯನ್ನು ಕೂಡಲೆ ಸರ್ಕಾರ ಪ್ರಾರಂಭಿಸಬೇಕು, ವಾಟಾಳ್ ನಾಗರಾಜ್

ಬೆಂಗಳೂರು,ಡಿ.5- ಮೇಕೆದಾಟು ಯೋಜನೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಸರ್ಕಾರ ಕೂಡಲೆ ಪ್ರಾರಂಭಿಸಬೇಕೆಂದು ಆಗ್ರಹಿಸಿ ನಾಳೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಭೂತದಹನ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ತಮಿಳುನಾಡು ರಾಜಕೀಯ ಕಾರಣಕ್ಕಾಗಿ ವಿರೋಧಿಸುತ್ತಿದೆ.ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.ರಾಜ್ಯ ಸರ್ಕಾರ ಕೂಡಲೇ ಈ ಯೋಜನೆಗೆ ಶಂಕುಸ್ಥಾಪನೆ ಮಾಡಬೇಕು. ಇದಕ್ಕಾಗಿ ನಾವು ನಾಳೆ ರಾಮನಗರದವರೆಗೂ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿರುವುದಾಗಿ ಹೇಳಿದರು.

ಬರಗಾಲದ ನೆಪವೊಡ್ಡಿ ಯಾವುದೇ ಕಾರಣಕ್ಕೂ ಹಂಪಿ ಉತ್ಸವವನ್ನು ನಿಲ್ಲಿಸಬಾರದು.ಹಂಪಿ ಉತ್ಸವಕ್ಕಾಗಿ ಆಗ್ರಹಿಸಿ ಇದೇ 9ರಂದು ವಿರೂಪಾಕ್ಷ ದೇವಾಲಯದ ಎದುರು ಏಕಾಂಗಿ ಹೋರಾಟ ನಡೆಸುತ್ತೇನೆ ಎಂದು ತಿಳಿಸಿದರು.

ಕನ್ನಡ ನಾಡಿನ ಪರಂಪರೆಯನ್ನು ಬಿಂಬಿಸುವಂತಹ ಹಂಪಿ ಉತ್ಸವ ಪ್ರತಿ ವರ್ಷ ನಡೆಯಬೇಕು.ಇದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದಂತಾಗುತ್ತದೆ.ಅಲ್ಲದೆ ನಮ್ಮ ನಾಡಿನ ಪರಂಪರೆಯನ್ನು ಎತ್ತಿ ಹಿಡಿದಂತಾಗುತ್ತದೆ.ಬರವಿದ್ದರೂ ಮೈಸೂರು ದಸರಾವನ್ನು ಸರ್ಕಾರ ವಿಜೃಂಭಣೆಯಿಂದ ಮಾಡಿದೆ.ಆದರೆ ಹಂಪಿ ಉತ್ಸವಕ್ಕೆ ಮೀನಾಮೇಷ ಎಣಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕದಂಬ ಉತ್ಸವ, ಹೊಯ್ಸಳ ಉತ್ಸವ, ಕರಾವಳಿ ಉತ್ಸವ ಈ ಎಲ್ಲಾ ಉತ್ಸವಗಳು ನಿರಂತರವಾಗಿ ನಡೆಯಬೇಕು. ಅದೇ ರೀತಿ ಮೈಸೂರು ದಸರಾ ಆಚರಣೆ ಮೂಲವಾದ ಹಂಪಿ ಉತ್ಸವವನ್ನು ಅತ್ಯಂತ ವೈಭವವಾಗಿ ಆಚರಣೆ ಮಾಡಬೇಕು ಎಂದು ಆಗ್ರಹಿಸಿದರು.
ಡಿಸ್ನಿಲ್ಯಾಂಡ್ ಬೇಡ:
ಕೆಆರ್‍ಎಸ್ ಬಳಿ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಡಿಸ್ನಿಲ್ಯಾಂಡ್‍ನಿಂದ ಅಣೆಕಟ್ಟಿಗೆ ಅಪಾಯ ಬರುತ್ತದೆ. ಹಾಗಾಗಿ ಡಿಸ್ನಿ ಲ್ಯಾಂಡ್ ನಿರ್ಮಾಣ ಮಾಡುವುದು ಬೇಡ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ