ವಿಧಾನ ಪರಿಷತ್‍ನ ಒಂದು ಸ್ಥಾನಕ್ಕಾಗಿ ಜೆಡಿಎಸ್ನಲ್ಲಿ ಪೈಪೋಟಿ

ಬೆಂಗಳೂರು,ಡಿ.3- ವಿಧಾನ ಪರಿಷತ್‍ನ ಮೂರು ಸ್ಥಾನಗಳ ನಾಮನಿರ್ದೇಶನ ಪ್ರಕ್ರಿಯೆಯಲ್ಲಿ ಈಗಾಗಲೇ ಕಾಂಗ್ರೆಸ್ ಪಾಲಿನ ಎರಡು ಸ್ಥಾನ ಭರ್ತಿಯಾಗಿವೆ. ಆದರೆ, ಜೆಡಿಎಸ್ ಪಾಲಿನ ಒಂದು ಸ್ಥಾನಕ್ಕಾಗಿ ಪೈಪೋಟಿ ಆರಂಭವಾಗಿದೆ.

ಕಾಂಗ್ರೆಸ್‍ನಿಂದ ಯು.ಬಿ. ವೆಂಕಟೇಶ್ ಹಾಗೂ ಪ್ರಕಾಶ್ ರಾಠೋಡ್ ಅವರನ್ನು ನೇಮಕ ಮಾಡಲಾಗಿದೆ.ಜೆಡಿಎಸ್ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಇನ್ನೂ ಮೀನಾಮೇಷ ಎಣಿಸುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲ ಆಗುವ ದೃಷ್ಟಿಯಿಂದ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರಭಾವಿ ಮುಖಂಡರೊಬ್ಬರ ಹುಡುಕಾಟದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಟಸ್ಥರಾಗಿದ್ದು, ನಾಮನಿರ್ದೇಶನದ ಜವಾಬ್ದಾರಿಯನ್ನು ದೊಡ್ಡಗೌಡರು ನಿರ್ವಹಿಸಲಿದ್ದಾರೆ. ಸಮಾಜಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದ ವ್ಯಕ್ತಿಯನ್ನು ವಿಧಾನ ಪರಿಷತ್‍ಗೆ ನೇಮಕ ಮಾಡಬೇಕಿದ್ದು, ಬಿಳಿಗಿರಿ ರಂಗನಬೆಟ್ಟದಲ್ಲಿ ಸೋಲಿಗರ ಶ್ರೇಯೋಭಿವೃದ್ಧಿಗೆ ದಶಕಗಳಿಂದ ಶ್ರಮಿಸುತ್ತಿರುವ ಡಾ. ಹೆಚ್. ಸುದರ್ಶನ್ ಸೂಕ್ತ ಎಂಬುದು ದೇವೇಗೌಡರ ಅಭಿಪ್ರಾಯವಾಗಿದೆ.

ಆದರೆ, ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿ ಪ್ರತಿಸ್ಪರ್ಧೆ ನೀಡಿದ್ದ ಮಧು ಬಂಗಾರಪ್ಪ ಅವರ ಹೆಸರೂ ಕೇಳಿಬರುತ್ತಿದೆ ಎಂದು ಮೂಲಗಳು ತಿಳಿಸಿವೆ. ಮಧು ಬಂಗಾರಪ್ಪ ಅವರನ್ನು ನೇಮಕ ಮಾಡಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈಡಿಗ ಮತಗಳನ್ನು ಸೆಳೆಯಬಹುದೆಂಬ ಲೆಕ್ಕಾಚಾರವೂ ಜೆಡಿಎಸ್?ನಲ್ಲಿ ನಡೆಯುತ್ತಿದೆ.

ಈ ಹಿಂದೆ ವಿಧಾನ ಪರಿಷತ್‍ಗೆ ಮಧು ಹೆಸರು ಪ್ರಸ್ತಾಪವಾಗಿತ್ತಾದರೂ ಹಿಂಬಾಗಿಲಿನ ರಾಜಕಾರಣಕ್ಕೆ ಅವರು ಆಸಕ್ತಿ ತೋರಿರಲಿಲ್ಲ. ಇದೀಗ ರಾಜಕೀಯ ಪರಿಸ್ಥಿತಿ ಬದಲಾಗಿದ್ದು, ಪರಿಷತ್‍ಗೆ ನೇಮಕಗೊಂಡರೆ ಸಂಪುಟದಲ್ಲೂ ಸ್ಥಾನ ಸಿಗುವ ಸಾಧ್ಯತೆಗಳಿರುವುದರಿಂದ ಅವರು ಒಪ್ಪಿಕೊಳ್ಳುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.ಒಂದು ವೇಳೆ ಒಪ್ಪದಿದ್ದರೆ ಮಾಜಿ ಶಾಸಕರಾದ ನಾರಾಯಣ ರಾವ್ ಹಾಗೂ ವೈಎಸ್‍ವಿ ದತ್ತಾ ಅವರನ್ನೂ ಪರಿಗಣಿಸುವ ಸಾಧ್ಯತೆಗಳಿವೆ.
ಉತ್ತರ ಕರ್ನಾಟಕಕ್ಕೂ ಆದ್ಯತೆ ನೀಡಬೇಕೆಂಬ ದೃಷ್ಟಿಯಿಂದ ಮಾಜಿ ಶಾಸಕ ಎನ್.ಹೆಚ್. ಕೋನರೆಡ್ಡಿ ಅವರಿಗೆ ಅವಕಾಶ ನೀಡಲಾಗುತ್ತದೆ ಎಂಬ ಮಾತುಗಳು ಜೆಡಿಎಸ್ ವಲಯದಲ್ಲಿ ಕೇಳಿಬರುತ್ತಿವೆ. ಒಟ್ಟಾರೆಯಾಗಿ ದೇವೇಗೌಡರ ಒಲವು ಯಾರ ಕಡೆಗೆ ಇದೆ ಎಂಬುದು ಕುತೂಹಲ ಕೆರಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ