ರಾಜ್ಯದಲ್ಲಿ ಕಲುಷಿತವಾಗಿರುವ 17 ನದಿಗಳು

ಬೆಂಗಳೂರು,ಡಿ.3- ರಾಜ್ಯದಲ್ಲಿರುವ 17 ನದಿಗಳು ಕಲುಷಿತವಾಗಿವೆ. ನದಿ ಸಂರಕ್ಷಣಾ ಸಮಿತಿ ರಚಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನೀಡಿರುವ ಆದೇಶದಂತೆ ನಾಲ್ವರು ಸದಸ್ಯರ ಸಮಿತಿ ರಚಿಸಿ, ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಇಲಾಖೆ ಆದೇಶ ಹೊರಡಿಸಿದೆ.

ಕಲುಷಿತಗೊಂಡಿರುವ ನದಿಗಳ ಹಾನಿಕಾರಕ ಅಂಶಗಳನ್ನು ಹೊರತೆಗೆದು, ಅವುಗಳನ್ನು ಕನಿಷ್ಠ ಸ್ನಾನಕ್ಕೆ ಬಳಕೆಯಾಗುವ ಸ್ಥಿತಿಗೆ ಪರಿವರ್ತಿಸಲು ಎರಡು ತಿಂಗಳಲ್ಲಿ ಕ್ರಿಯಾಯೋಜನೆ ರೂಪಿಸಿ, ಆರು ತಿಂಗಳ ಅವಧಿಯಲ್ಲಿ ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಇಲಾಖೆಗೆ ಎನ್‍ಜಿಟಿ 2018ರ ಸೆಪ್ಟೆಂಬರ್‍ನಲ್ಲಿ ಆದೇಶಿಸಿತ್ತು.

ಸಮಿತಿಯ ಅಧ್ಯಕ್ಷರಾಗಿ ಕೇಂದ್ರ ಪರಿಸರ ಹಾಗೂ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಸದಸ್ಯರಾಗಿ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಆಯುಕ್ತರು ಹಾಗೂ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿಗಳನ್ನು ನೇಮಿಸಿರುವುದಾಗಿ ಆದೇಶ ತಿಳಿಸಿದೆ.

ಕಲುಷಿತ ನದಿಗಳು :
ಜೀವ ರಾಸಾಯನಿಕ ಆಮ್ಲಜನಕ ಬೇಡಿಕೆಯ (ಬಿಒಡಿ) ಪ್ರಮಾಣ ಲೀಟರ್ ಗೆ 3 ಮಿಲಿಗ್ರಾಂಗೂ ಹೆಚ್ಚಿರುವ ದೇಶದ 351 ನದಿಗಳನ್ನು ಅತ್ಯಂತ ಕಲುಷಿತ ಎಂದು ಗುರುತಿಸಲಾಗಿದ್ದು, ರಾಜ್ಯದ ಪ್ರಮುಖ ನದಿಗಳಾದ ಕಾವೇರಿ, ತುಂಗಭದ್ರ, ಅರ್ಕಾವತಿ, ಭೀಮಾ, ಭದ್ರಾ, ಕಾಳಿ ನದಿಗಳು ಸೇರಿ 17 ನದಿಗಳು ಕಲುಷಿತಗೊಂಡಿವೆ ಎಂದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನ್ಯಾಯಾಧಿಕರಣಕ್ಕೆ ವರದಿ ಸಲ್ಲಿಸಿತ್ತು.

ಸಮಿತಿಯ ಕ್ರಿಯಾಯೋಜನೆ ನದಿಗಳಿಗೆ ಕಾರ್ಖಾನೆ ಸೇರಿ ಇತರ ಪ್ರದೇಶಗಳ ವಿಷಯುಕ್ತ ಕೊಳಚೆ ನೀರು ಸೇರದಂತೆ ಕ್ರಮ, ಅಂತರ್ಜಲದ ಸಂರಕ್ಷಣೆ, ಉತ್ತಮ ನೀರಾವರಿ, ಮಳೆ ನೀರುಕೊಯ್ಲು, ನದಿಯ ಇಕ್ಕೆಲಗಳಲ್ಲಿ ಗಿಡಗಳನ್ನು ನೆಡುವುದು ಇತ್ಯಾದಿ ಯೋಜನೆಗಳನ್ನು ಒಳಗೊಂಡಿರಲಿದೆ .
ಸಮಿತಿ ಸಂಚಾಲಕರು
ಸಮಿತಿಯಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಅಧ್ಯಕ್ಷರಾಗಿದ್ದು, ರಸ್ತೆ ಸುರಕ್ಷತೆ ಮತ್ತು ಸಾರಿಗೆ ಇಲಾಖೆಯ ಆಯುಕ್ತರು, ಕೈಗಾರಿಕಾ ಅಭಿವೃದ್ಧಿ ಮತ್ತು ವಾಣಿಜ್ಯ ಇಲಾಖೆಯ ಆಯುಕ್ತರು, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು, ಕೃಷಿ ಇಲಾಖೆ ಆಯುಕ್ತರನ್ನಾಗಿ ಸದಸ್ಯರನ್ನಾಗಿ ನೇಮಿಸಿದ್ದು, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿಯನ್ನು ಸಂಚಾಲಕ ಸದಸ್ಯರನ್ನಾಗಿ ನಿಯುಕ್ತಿಗೊಳಿಸಲಾಗಿದೆ.

102 ಮಾಲಿನ್ಯಭರಿತ ನಗರಗಳು:
ಜೊತೆಗೆ, ರಾಜ್ಯದಲ್ಲಿ ಅತ್ಯಂತ ಮಾಲಿನ್ಯಭರಿತ ನಗರಗಳು ಎಂದು ಗುರುತಿಸಲ್ಪಟ್ಟ 102 ನಗರಗಳ ಪಟ್ಟಿಯಲ್ಲಿ ರಾಜ್ಯದ 4 ನಗರಗಳ ಹೆಸರು ಕೂಡ ಉಲ್ಲೇಖಗೊಂಡಿದ್ದು, ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶದಂತೆ ಅವುಗಳ ಮಾಲಿನ್ಯ ನಿಯಂತ್ರಣಕ್ಕೆ ಆರು ಸದಸ್ಯರ ಸಮಿತಿ ರಚಿಸಿ ಇಲಾಖೆ ಪ್ರತ್ಯೇಕ ಆದೇಶ ಹೊರಡಿಸಿದೆ. ಬೆಂಗಳೂರು ಸೇರಿ ಒಟ್ಟು 102 ನಗರಗಳಲ್ಲಿ ವಾಯುಮಾಲಿನ್ಯ ವಿಪರೀತವಾಗಿದೆ.2024ರ ಒಳಗೆ ಶೇ.20-30ರಷ್ಟು ಮಾಲಿನ್ಯವನ್ನು ತಗ್ಗಿಸಲು ಕೇಂದ್ರ ಪರಿಸರ ಸಚಿವಾಲಯ ಸೂಚನೆ ನೀಡಿದೆ.

ವಾಯು ಮಾಲಿನ್ಯ ಇಳಿಸಲು ಕಾಲಮಿತಿಯಲ್ಲಿ ಕ್ರಿಯಾಯೋಜನೆ ರೂಪಿಸಬೇಕು, ವಾಯು ಗುಣಮಟ್ಟ ಸೂಚ್ಯಂಕ ಆಧಾರದಲ್ಲಿ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲ್ಯಾನ್ ರೂಪಿಸಬೇಕು ಎಂದು ಎನ್‍ಸಿಎಪಿಯಲ್ಲಿ ಸೂಚಿಸಲಾಗಿದೆ.ವಾಯುಮಾಲಿನ್ಯ ತಡೆ, ನಿಯಂತ್ರಣ ಮತ್ತು ಇಳಿಕೆ ಉದ್ದೇಶದಿಂದ ಎನ್‍ಸಿಎಪಿ ಸಮಗ್ರಹ ನಿರ್ವಹಣಾ ಯೋಜನೆಯನ್ನು ರೂಪಿಸಿದೆ.

ಕೇಂದ್ರ ಸಚಿವ ಹರ್ಷವರ್ಧನ್ ಪೆÇೀಲೆಂಡ್‍ನ ಕಟೌಯಿಸ್‍ನಲ್ಲಿ ಡಿಸೆಂಬರ್ 2ರಿಂದ ನಡೆಯುವ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.ದೇಶಾದ್ಯಂತ ವಾಯು ಗುಣಮಟ್ಟದ ಮೇಲೆ ನಿಗಾ ಇರಿಸುವ ಜಾಲದ ಕಾರ್ಯಕ್ಷಮತೆ ಹೆಚ್ಚಳ ಮಾಡುವ ಉದ್ದೇಶವೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ