ಬೆಂಗಳೂರು,ನ.30-ಕಾಂಗ್ರೆಸ್ನಲ್ಲಿದ್ದುಕೊಂಡೇ ಆಗಾಗ್ಗೆ ಭಿನ್ನಮತ ಹೊರ ಹಾಕುತ್ತಿರುವ ಸಚಿವ ರಮೇಶ್ ಜಾರಕಿಹೊಳಿಯನ್ನು ಬಿಜೆಪಿ ಶಾಸಕರು ಇಂದು ಭೇಟಿಯಾಗಿ ಮಾತುಕತೆ ನಡೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಶಾಸಕರಾದ ಸಿದ್ದು ಸವದಿ(ತೆರದಾಳ), ಪರಣ್ಣಮನವಳ್ಳಿ(ಗಂಗಾವತಿ) ಹಾಗೂ ಮಹದೇವಪ್ಪ ಯರವಾಡ(ರಾಮದುರ್ಗ) ಇವರು ರಮೇಶ್ ಜಾರಕಿಹೊಳಿ ನಿವಾಸ ಸೆವೆನ್ ಕ್ವಾಟ್ರರ್ಸ್ಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮಾತುಕತೆ ವಿವರಗಳು ಲಭ್ಯವಾಗಿಲ್ಲವಾದರೂ ಏಕಾಏಕಿ ರಮೇಶ್ಜಾರಕಿ ಹೊಳಿಯನ್ನು ಈ ಮೂವರು ಶಾಸಕರು ಭೇಟಿ ಮಾಡಿರುವುದು ಅನೇಕ ಸಂಶಯಗಳನ್ನು ಹುಟ್ಟುಹಾಕಿದೆ.
ಇಂದು ಸಂಜೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಕೇರಳಕ್ಕೆ ತೆರಳುತ್ತಿರುವುದು ಇತ್ತ ಶಾಸಕರು ಜಾರಕಿಹೊಳಿ ಜೊತೆ ಗೌಪ್ಯವಾಗಿ ಭೇಟಿಯಾಗಿರುವುದು ಆಪರೇಷನ್ ಕಮಲದ ಮುನ್ಸೂಚನೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.
ಅದರಲ್ಲೂ ಮಹದೇವಪ್ಪ ಯರವಾಡ ಬೆಳಗಾವಿ ಜಿಲ್ಲೆಯ ಬಿಜೆಪಿ ಶಾಸಕರಾಗಿರುವುದರಿಂದ ಮೊದಲಿನಿಂದಲೂ ರಮೇಶ್ ಜಾರಕಿಹೊಳಿಯೊಂದಿಗೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದಾರೆ. ಬಿಜೆಪಿ ನಾಯಕರ ಸೂಚನೆ ಮೇರೆಗೆ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಈ ಹಿಂದೆ ಕಾಂಗ್ರೆಸ್ನ ಅತೃಪ್ತ ಶಾಸಕರನ್ನು ಸೆಳೆಯುವ ಹೊಣೆಗಾರಿಕೆ ಬಿಜೆಪಿ ಉಪಾಧ್ಯಕ್ಷ ಹಾಗೂ ಶಾಸಕ ಶ್ರೀರಾಮುಲುಗೆ ನೀಡಲಾಗಿತ್ತು.ಆದರೆ ನಿರೀಕ್ಷಿತ ಮಟ್ಟದಲ್ಲಿ ಕಾರ್ಯಾಚರಣೆ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಯಡಿಯೂರಪ್ಪನವರ ಆಪ್ತರೂ ಆಗಿರುವ ಸಿದ್ದು ಸವದಿ ಮೂಲಕ ಜಾರಕಿಹೊಳಿಯನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ಮುಂದುವರೆಸಲಾಗಿದೆ.
ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಆಪರೇಷನ್ ಕಮಲ ಸದ್ಯಕ್ಕೆ ಸ್ಥಗಿತಗೊಂಡಿತ್ತು.
ಡಿಸೆಂಬರ್ 10ರಂದು ಬೆಳಗಾವಿ ಅಧಿವೇಶನ ಆರಂಭವಾಗಲಿದ್ದು ಅಷ್ಟರೊಳಗೆ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯಾಗಬೇಕೆಂದು ಕೆಲ ಭಿನ್ನಮತೀಯ ಶಾಸಕರು ಪಟ್ಟು ಹಿಡಿದಿದ್ದಾರೆ.
ಸಚಿವ ಸ್ಥಾನ ಸಿಗದೆ ಕೆಲವರು ಭಿನ್ನಮತ ಏಳಬಹುದೆಂಬ ಲೆಕ್ಕಾಚಾರ ಬಿಜೆಪಿಯಲ್ಲಿದೆ. ಪರಿಸ್ಥಿತಿಯ ಲಾಭ ಮಾಡಿಕೊಳ್ಳಲು ಕಮಲ ನಾಯಕರು ಈಗಾಗಲೇ ತೆರೆಮರೆಯಲ್ಲಿ ರಾಜಕೀಯ ದಾಳ ಉರುಳಿಸಲು ಸಜ್ಜಾಗಿದ್ದಾರೆ.