ಇಂದಿನಿಂದ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಒಂದುವಾರ ಕೇರಳ ಪ್ರವಾಸ

ಬೆಂಗಳೂರು,ನ.30- ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಇಂದಿನಿಂದ ಒಂದು ವಾರ ಕಾಲ ಕೇರಳಕ್ಕೆ ತೆರಳುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯಲು ಯಡಿಯೂರಪ್ಪ ತಮ್ಮ ಆಪ್ತರೊಂದಿಗೆ ಕೇರಳಕ್ಕೆ ತೆರಳುತ್ತಿದ್ದಾರೆ ಎಂದು ಹೇಳಲಾಗಿದೆ.ಆದರೆ ವಾಸ್ತವವಾಗಿ ಈ ಪ್ರವಾಸದ ಹಿಂದೆ ರಾಜಕೀಯ ಉದ್ದೇಶವೂ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಸಾಮಾನ್ಯವಾಗಿ ಯಡಿಯೂರಪ್ಪ ದಿನದ 24 ಗಂಟೆಯೂ ರಾಜಕಾರಣದಿಂದ ದೂರ ಇರುವ ಆಸಾಮಿಯಲ್ಲ. ಕುಳಿತರೂ, ನಿಂತರೂ ರಾಜಕಾರಣವೇ ಅವರು ಉಸಿರು ಎಂಬುದರಲ್ಲಿ ಎರಡು ಮಾತಿಲ್ಲ. ಅಂತಹ ಯಡಿಯೂರಪ್ಪ ಏಕಾಏಕಿ ಕೇರಳ ಪ್ರವಾಸ ಕೈಗೊಂಡಿರುವುದರಲ್ಲಿ ರಾಜಕೀಯ ಲೆಕ್ಕಾಚಾರ ಅಡಗಿದೆ ಎಂದು ಹೇಳಲಾಗುತ್ತಿದೆ.

ಸಚಿವ ಸಂಪುಟ ವಿಸ್ತರಣೆಯಾಗದೆ ಅಸಮಾಧಾನಗೊಂಡಿರುವ ದೋಸ್ತಿ ಪಕ್ಷಗಳಲ್ಲಿನ ಕೆಲವು ಶಾಸಕರನ್ನು ಈಗಲೂ ಸೆಳೆಯುವ ಪ್ರಯತ್ನ ಬಿಜೆಪಿಯಲ್ಲಿ ಮುಂದುವರೆದಿದೆ ಎಂದು ಹೇಳಲಾಗುತ್ತಿದೆ.
ಹೀಗಾಗಿಯೆ ಯಡಿಯೂರಪ್ಪ ದೂರದ ದೇವರನಾಡು ಕೇರಳದಲ್ಲಿ ಕುಳಿತು ಆಪರೇಷನ್ ಕಮಲಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಅಲ್ಲಿಂದಲೇ ಮಾಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಹಿಂದೆ ಹಲವು ಬಾರಿ ಆಪರೇಷನ್ ಕಮಲದ ಮಾತುಗಳು ಕೇಳಿಬಂದಿತ್ತಾದರೂ ಗಾಳಿಯಲ್ಲೇ ಠುಸ್ಸಾಗಿತ್ತು.ಇತ್ತೀಚೆಗೆ ನಡೆದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ತೀವ್ರ ಹಿನ್ನಡೆಯಾಗಿದ್ದರಿಂದ ಆಪರೇಷನ್ ಕಮಲ ನೆನಗುದಿಗೆ ಬಿದ್ದಿತ್ತು.
ಈಗ ಸಚಿವ ಸ್ಥಾನದ ಆಕಾಂಕ್ಷಿಗಳು ಅಸಮಾಧಾನ ಗೊಂಡಿರುವುದರಿಂದ ಒಂದಿಷ್ಟು ಶಾಸಕರು ಬಂಡಾಯ ಏಳಬಹುದೆಂಬ ನಿರೀಕ್ಷೆಯಲ್ಲಿದ್ದಾರೆ ಯಡಿಯೂರಪ್ಪ.
ಬೆಂಗಳೂರಿನಲ್ಲೇ ಉಳಿದರೆ ಆಪರೇಷನ್ ಕಮಲದ ಸೂತ್ರಧಾರಿ ನಾನೇ ಎಂದು ವಿರೋಧ ಪಕ್ಷದವರು ಆಪಾದಿಸಬಹುದು. ಈ ಆಪಾದನೆಯಿಂದ ದೂರವಾಗಬೇಕಾದರೆ ಬೆಂಗಳೂರಿನಲ್ಲಿಯೇ ಇರಬಾರದೆಂದು ತೀರ್ಮಾನಿಸಿಯೇ ಬಿಎಸ್‍ವೈ ಕೇರಳ ಪ್ರವಾಸ ಕೈಗೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ