ಕಣಿವೆ ರಾಜ್ಯದಲ್ಲಿ 6 ಉಗ್ರರ ಹತ್ಯೆ; ವರ್ಷದ ದೊಡ್ಡ ಪ್ರಮಾಣದ ಎನ್ ಕೌಂಟರ್

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಏಕಕಾಲದಲ್ಲಿ ಬರೊಬ್ಬರಿ 6 ಉಗ್ರರನ್ನು ಎನ್ ಕೌಂಟರ್ ನಲ್ಲಿ ಕೊಂದು ಹಾಕಿದೆ.

ಅನಂತ್ ನಾಗ್ ಜಿಲ್ಲೆಯಲ್ಲಿ ಈ ಎನ್ ಕೌಂಟರ್ ನಡೆದಿದ್ದು, ಜಿಲ್ಲೆಯ ಬಿಜ್ ಬೆಹರಾ ಪ್ರಾಂತ್ಯದ ಸೆಕಿಪೋರಾ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ಖಚಿತ ಮಾಹಿತಿ ಪಡೆದ ಸೇನೆ ದಿಢೀರ್ ದಾಳಿ ನಡೆಸಿದೆ. ಈ ವೇಳೆ ಕನಿಷ್ಠ  ಉಗ್ರರು ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಉಗ್ರರು ಕೂಡ ಪ್ರತಿ ದಾಳಿ ನಡೆಸಿದ್ದು, ಸೇನಾಪಡೆಯಲ್ಲಿನ ಸಾವು-ನೋವುಗಳ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಆದರೆ ಘಟನಾ ಸ್ಥಳದಲ್ಲಿ ಮತ್ತಷ್ಟು ಉಗ್ರರಿರುವ ಶಂಕೆ ಇದ್ದು, ಎನ್ ಕೌಂಟರ್ ಮುಂದುವರೆದಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಪ್ರಸ್ತುತ ಎನ್ ಕೌಂಟರ್ ಈ ವರ್ಷದ ಅತೀ ದೊಡ್ಡ ಎನ್ ಕೌಂಟರ್ ಎಂದು ಹೇಳಲಾಗುತ್ತಿದ್ದು, ಏಕಕಾಲದಲ್ಲೇ ಇಷ್ಟು ಪ್ರಮಾಣದ ಉಗ್ರರು ಹತರಾಗಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ.

ಇನ್ನು ಕಳೆದ ಮಂಗಳವಾರ ಇದೇ ಕಾಶ್ಮೀರದಲ್ಲಿ ಅಪರಿಚಿತ ಶಸ್ತ್ರಧಾರಿಗಳು ಹುರಿಯತ್ ನಾಯಕ ಹಝಿಫುಲ್ಲಾ ಮಿರ್ ಅವರನ್ನು ಗುಂಡಿಟ್ಟು ಕೊಂದು ಹಾಕಿದ್ದರು. ಇದು ದುಷ್ಕರ್ಮಿಗಳ ಕೃತ್ಯವೋ ಅಥವಾ ಉಗ್ರರ ದಾಳಿಯೋ ಇನ್ನೂ ತಿಳಿದಿಲ್ಲ. ಈ ಬಗ್ಗೆ ಪೊಲೀಸ್ ತನಿಖೆ ಪ್ರಗತಿಯಲ್ಲಿದೆ.

ಇದರ ಬೆನ್ನಲ್ಲೇ ಸೇನೆ ಅನಂತ್ ನಾಗ್ ಜಿಲ್ಲೆಯಲ್ಲಿ ಭರ್ಜರಿ ಕಾರ್ಯಾರಚರಣೆ ನಡೆಸಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ