ಭಾರತೀಯ ಸೇನೆಗೆ ಮತ್ತೊಂದು ಜಯ; ಇಬ್ಬರು ಜೆಇಎಮ್​ ಉಗ್ರರನ್ನು ಹೊಡೆದುರುಳಿಸಿದ ಸೈನಿಕರು

ಶ್ರೀನಗರ: ಜಮ್ಮು-ಕಾಶ್ಮೀರ ಶೋಫಿಯಾನಾ ಜಿಲ್ಲೆಯಲ್ಲಿ ಉಗ್ರರು ಹಾಗೂ ಭಾರತೀಯ ಸೇನೆ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಇಬ್ಬರು ಭಯೋತ್ಪಾದಕರನ್ನು ಸೇನೆ ಹೊಡೆದುರುಳಿಸಿದೆ. ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಂಡ ಬೆನ್ನಲ್ಲೇ ಈ ಕಾರ್ಯಾಚರಣೆ ನಡೆದಿದೆ.

ಶೋಫಿಯಾನದ ಮೀಮೇಂದರ್​ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಸೇನೆ ಮುಂಜಾನೆ 4.20ರ ಸುಮಾರಿಗೆ ಕಾರ್ಯಾಚರಣೆಗೆ ಇಳಿದಿತ್ತು.

ಈ ವೇಳೆ ಉಗ್ರರು ತಮ್ಮ ಅಡಗು ತಾಣದಿಂದಲೇ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದಾರೆ. ಇದಕ್ಕೆ ಪ್ರತಿ ದಾಳಿ ನಡೆಸಿದ ನಮ್ಮ ಸೈನಿಕರು ಎರಡು ಉಗ್ರರನ್ನು ಹತ್ಯೆ ಮಾಡಿದ್ದಾರೆ. ದಾಳಿ ವೇಳೆ ಭಾರತೀಯ ಸೈನಿಕರಿಗೆ ಯಾವುದೇ ಹಾನಿ ಉಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ, ಈ ಭಾಗದಲ್ಲಿ ಉಗ್ರರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಮಂಗಳವಾರ ಮುಂಜಾನೆ ಪುಲ್ವಾಮಾ ದಾಳಿಗೆ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿತ್ತು. ಪಾಕ್​ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿದ ಭಾರತೀಯ ಯುದ್ಧ ವಿಮಾನಗಳು ಅಲ್ಲಿರುವ ಉಗ್ರರ ಅಡಗು ತಾಣಗಳನ್ನು ನಾಶ ಮಾಡಿತ್ತು. ಈ ಮೂಲಕ ಸರ್ಜಿಕಲ್​ ಸ್ಟ್ರೈಕ್​ 2 ನಡೆಸುವಲ್ಲಿ ಭಾರತ ಯಶಸ್ವಿಯಾಗಿದೆ.

ಇದೇ ಮೊದಲ ಬಾರಿಗೆ ಭಾರತೀಯ ವಾಯುಸೇನೆ ವಿಮಾನಗಳು ಪಾಕ್​ ಗಡಿ ದಾಟಿ ದಾಳಿ ನಡೆಸಿತ್ತು. ಮಂಗಳವಾರ ಬೆಳಗಿನ ಜಾವ 3.30ರ ಸುಮಾರಿಗೆ ಬಾಲಕೋಟ್​ ಪ್ರದೇಶದಲ್ಲಿ ದಾಳಿ ನಡೆಸಿತ್ತು. ಇದರಲ್ಲಿ 200-300 ಉಗ್ರರು ಸತ್ತಿದ್ದಾರೆ ಎನ್ನಲಾಗುತ್ತಿದೆ. ಇದಾದ ಬೆನ್ನಲ್ಲೇ ಜೆಇಎಂನ ಎರಡು ಉಗ್ರರನ್ನು ಹತ್ಯೆ ಮಾಡಿರುವುದು ಸೇನೆಗೆ ಸಿಕ್ಕ ಮತ್ತೊಂದು ಜಯ ಎಂದು ಬಣ್ಣಿಸಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ