ವಿದ್ಯುತ್ ಚಾಲಿತ ಕಾರು ಮತ್ತು ಸ್ಕೂಟರ್‍ಗಳಿಗೆ ಚಾರ್ಜಿಂಗ್ ಪಾಯಿಂಟ್ ಅಳವಡಿಸಿದ ಬೆಸ್ಕಾಂ

ಬೆಂಗಳೂರು,ನ.16-ವಿಧಾನಸೌಧದ ಆವರಣದಲ್ಲಿ ವಿದ್ಯುತ್ ಚಾಲಿತ ಕಾರು ಮತ್ತು ಸ್ಕೂಟರ್‍ಗಳಿಗೆ ಚಾರ್ಜಿಂಗ್ ಪಾಯಿಂಟ್‍ನ್ನು ಬೆಸ್ಕಾಂ ವತಿಯಿಂದ ಅಳವಡಿಸಲಾಗಿದೆ.

ಚಾರ್ಜಿಂಗ್ ಬ್ಯಾಂಕ್ ಅಳವಡಿಕೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಶಿಖಾ ಅವರು, ಬೆಂಗಳೂರಿನಲ್ಲಿ ಬೆಸ್ಕಾಂ ಮತ್ತು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಆವರಣದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗಾಗಿ ವಿದ್ಯುತ್ ಚಾಲಿತ ಚಾರ್ಜಿಂಗ್ ಪಾಯಿಂಟ್ ಅಳವಡಿಸಲಾಗಿತ್ತು.ಈಗ ವಿಧಾನಸೌಧದ ಆವರಣದಲ್ಲಿ ಚಾರ್ಜಿಂಗ್ ಪಾಯಿಂಟ್ ಅಳವಡಿಸಲಾಗಿದೆ. ಮುಂದಿನ ಜನವರಿವರೆಗೆ ಸರ್ಕಾರ ಬೆಂಗಳೂರಿನ 11 ಕಡೆಗಳಲ್ಲಿ ಇಂತಹ ಚಾರ್ಜಿಂಗ್ ಪಾಯಿಂಟ್ ಅಳವಡಿಸಲಾಗುವುದು. ಅಲ್ಲದೆ ಖಾಸಗಿಯವರಿಂದಲೂ ಚಾರ್ಜಿಂಗ್ ಪಾಯಿಂಟ್ ಅಳವಡಿಸಲಾಗುವುದು ಎಂದರು.

ಪ್ರಾರಂಭಿಕ ಹಂತದಲ್ಲಿ ವಿದ್ಯುತ್ ವಾಹನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಉಚಿತವಾಗಿ ಚಾರ್ಜಿಂಗ್ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು. ನಂತರ ದಿನಗಳಲ್ಲಿ ಪ್ರತಿ ಯೂನಿಟ್‍ಗೆ 4.5 ರೂ. ದರ ನಿಗದಿಪಡಿಸಲಾಗುವುದು ಎಂದು ಹೇಳಿದರು.

ಖಾಸಗಿ ಅಪಾರ್ಟ್‍ಮೆಂಟ್‍ಗಳಲ್ಲಿ ಹಾಗೂ ಮನೆಗಳಲ್ಲಿ ವಿದ್ಯುತ್ ವಾಹನಗಳ ಚಾರ್ಜಿಂಗ್ ಪಾಯಿಂಟ್ ಅಳವಡಿಕೆಗೆ ಅನುಕೂಲವಾಗುವಂತೆ ಬೆಸ್ಕಾಂ ಮತ್ತು ನಗರಾಭಿವೃದ್ದಿ ಬೈಲಾದಲ್ಲಿ ತಿದ್ದುಪಡಿ ಮಾಡಲಾಗುತ್ತದೆ ಎಂದರು.

ವಿದ್ಯುತ್ ಚಾಲಿತ ವಾಹನಗಳಲ್ಲಿ ಪ್ರತಿ ಕಿ.ಮೀಗೆ ಒಂದು ರೂ. ವೆಚ್ಚವಾದರೆ ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ವಾಹನಗಳಿಗೆ 5 ರೂ. ವೆಚ್ಚವಾಗಲಿದೆ. ಅಲ್ಲದೆ ವಿದ್ಯುತ್ ಚಾಲಿತ ವಾಹನಗಳು ಪರಿಸರ ಸ್ನೇಹಿಯಾಗಿರುತ್ತವೆ. ಇಂತಹ ವಾಹನಗಳ ಬಳಕೆಗೆ ಸರ್ಕಾರ ಉತ್ತೇಜನ ನೀಡುತ್ತಿದೆ ಎಂದು ತಿಳಿಸಿದರು.
ಬೆಸ್ಕಾಂ ಪ್ರತಿ ಯೂನಿಟ್ ವಿದ್ಯುತ್‍ಗೆ 4.5 ರೂ.ನಂತೆ ಒಂದು ಕಿಲೋ ವ್ಯಾಟ್ ವಿದ್ಯುತ್‍ಗೆ 50 ರೂ. ಶುಲ್ಕ ನಿಗದಿಪಡಿಸಿದೆ. ಒಂದು ವಾಹನ ಪೂರ್ಣವಾಗಿ ಚಾರ್ಜ್ ಆಗಲು 90 ನಿಮಿಷ ಬೇಕಾಗುತ್ತದೆ. 15 ಕಿಲೋವ್ಯಾಟ್ ಚಾರ್ಜ್ ಮಾಡಿದರೆ 100ರಿಂದ 120 ಕಿ.ಮೀ ಕ್ರಮಿಸಬಹುದಾಗಿದೆ ಎಂದು ವಿವರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ